ಸಾರಾಂಶ
ನವದೆಹಲಿ : ಬಾಂಗ್ಲಾದೇಶ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ನಿರ್ಗಮಿಸಿದ್ದು, ಲಂಡನ್‌ನಲ್ಲಿ ರಾಜಾಶ್ರಯ ಪಡೆಯಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಅವರು ಸಿ130ಜೆ ಮಿಲಿಟರಿ ಸರಕು ವಿಮಾನದಲ್ಲಿ ದಿಲ್ಲಿಗೆ ಆಗಮಿಸಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಚರ್ಚಿಸಿದ್ದಾರೆ.
ಜನರ ದಂಗೆ ಹಾಗೂ ಸೇನೆಯ ಎಚ್ಚರಿಕೆಗೆ ಬೆಚ್ಚಿದ ಹಸೀನಾ ಸೋಮವಾರ ಮಧ್ಯಾಹ್ನ ಢಾಕಾದಿಂದ ಸೋದರಿ ರೆಹಾನಾ ಜತೆ ವಿಮಾನದಲ್ಲಿ ನಿರ್ಗಮಿಸಿದರು. ಮೊದಲು ಅವರು ಭಾರತದ ಅಗರ್ತಲಾದಲ್ಲಿ ಲ್ಯಾಂಡ್ ಆಗಲಿದ್ದಾರೆ ಎಂಬ ಊಹಾಪೋಹ ಹರಡಿತ್ತು. ಆದರೆ ಅವರು ದಿಲ್ಲಿಯ ಹಿಂಡನ್ ಏರ್‌ಬೇಸ್‌ಗೆ ಬಂದಿಳಿದರು.
ಅಲ್ಲಿ ತಮ್ಮನ್ನು ಬರಮಾಡಿಕೊಂಡ ಅಜಿತ್ ದೋವಲ್ ಜತೆ ಮಾತುಕತೆ ನಡೆಸಿದರು. ಅಲ್ಲದೆ, ದಿಲ್ಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಆಗಿರುವ ಪುತ್ರಿ ಸೈಮಾ ವಾಜಿದ್ ಅವರನ್ನೂ ಹಸೀನಾ ಭೇಟಿಯಾದರು.ಬಾಂಗ್ಲಾದೇಶದ ಕೋರಿಕೆ ಮೇರೆಗೆ ಭಾರತದ ವಾಯುವಲಯದಲ್ಲಿ ಹಸೀನಾ ವಿಮಾನ ಸಾಗಲು ಭಾರತ ಸರ್ಕಾರ ಅವಕಾಶ ಕಲ್ಪಿಸಿತ್ತು. ನಂತರ ಅವರು ದಿಲ್ಲಿಯಿಂದ ಬೇರೆ ವಿಮಾನದಲ್ಲಿ ಲಂಡನ್‌ಗೆ ಹೊರಟರು. ಸೋದರಿ ರೆಹಾನಾ ಬ್ರಿಟನ್ ಪ್ರಜೆಯಾಗಿದ್ದಾರೆ. ಹಸೀನಾ ಕೂಡ ಬ್ರಿಟನ್‌ನಲ್ಲೇ ರಾಜಾಶ್ರಯ ಕೋರಿ ಅರ್ಜಿ ಸಲ್ಲಿಸಿದ್ದು, ಸೋದರಿ ಜತೆ ತಂಗಲಿದ್ದಾರೆ ಎಂದು ಮೂಲಗಳು ಹೇಳಿವೆ.
ಹಸೀನಾ ರಾಜಕೀಯ ನಿವೃತ್ತಿ ಘೋಷಿಸಿದ ಪುತ್ರ ಜಾಯ್
ಢಾಕಾ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಪ್ರಧಾನಿ ಶೇಖ್ ಹಸೀನಾ ಇನ್ನೆಂದೂ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಅವರ ಪುತ್ರ ಸಜೀಬ್ ವಾಝೇದ್ ಜಾಯ್ ಘೋಷಿಸಿದ್ದಾರೆ. ‘ನನ್ನ ತಾಯಿ 2009ರಲ್ಲಿ ಅಧಿಕಾರ ವಹಿಸಿಕೊಂಡಾಗ ದುಸ್ಥಿತಿಯಲ್ಲಿದ್ದ ಬಡ ದೇಶವನ್ನು ಸುಸ್ಥಿತಿಗೆ ತಂದಿದ್ದಾರೆ. ಇಲ್ಲಿನ ಆರ್ಥಿಕತೆ ಪ್ರತಿ ವರ್ಷ ಶೇ.6ರಷ್ಟು ಬೆಳವಣಿಗೆ ಕಂಡಿದೆ. ಆದರೆ ಈಗ ಅವರ ಕೊಡುಗೆಯನ್ನು ಲೆಕ್ಕಿಸದ ಸಣ್ಣ ಗುಂಪು ತಿರುಗಿಬಿದ್ದಿರುವುದು ಆಕೆಗೆ ನಿರಾಶೆಯನ್ನು ಉಂಟುಮಾಡಿದೆ’ ಎಂದು ಜಾಯ್ ಹೇಳಿದ್ದಾರೆ.