ಸಾರಾಂಶ
ಒಂದು ರಾಷ್ಟ್ರ, ಒಂದು ಚುನಾವಣಾ ಪ್ರಸ್ತಾಪವು ಅಪಾಯಕಾರಿ ಮತ್ತು ದೋಷಪೂರಿತವಾಗಿದೆ ಎಂದು ಹಿರಿಯ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈ : ಒಂದು ರಾಷ್ಟ್ರ, ಒಂದು ಚುನಾವಣಾ ಪ್ರಸ್ತಾಪವು ಅಪಾಯಕಾರಿ, ದೋಷಪೂರಿತವಾಗಿದೆ ಮತ್ತು ಅದರ ಗುರುತುಗಳು ಇನ್ನೂ ಕೆಲವು ದೇಶಗಳಲ್ಲಿ ಅಸ್ತಿತ್ವದಲ್ಲಿವೆ. ಆದ್ದರಿಂದ ಭಾರತಕ್ಕೆ ಇದು ಅಗತ್ಯವಿಲ್ಲ ಮತ್ತು ಭವಿಷ್ಯದಲ್ಲಿಯೂ ಇದರ ಅಗತ್ಯವಿರುವುದಿಲ್ಲ ಎಂದು ಹಿರಿಯ ನಟ ಮತ್ತು ಮಕ್ಕಳ್ ನೀತಿ ಮಯ್ಯಂ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.
ಶನಿವಾರ ಮಾತನಾಡಿದ ಅವರು, ‘2014 ಅಥವಾ 2015ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆದಿದ್ದರೆ ಒಂದು ಪಕ್ಷ ಸಂಪೂರ್ಣ ಸ್ವೀಪ್ ಮಾಡುತ್ತಿತ್ತು. ಸರ್ವಾಧಿಕಾರ ಸ್ಥಾಪನೆ ಆಗುತ್ತಿತ್ತು. ಒಬ್ಬನೇ ನಾಯಕನ ಪ್ರಾಬಲ್ಯಕ್ಕೆ ಕಾರಣವಾಗುತ್ತಿತ್ತು. ನಮ್ಮ ವಾಕ್ ಸ್ವಾತಂತ್ರ್ಯಕ್ಕೆ ಕತ್ತರಿ ಬೀಳುತ್ತಿತ್ತು. ಆದರೆ ಅದು ಆಗಿಲ್ಲ. ಹೀಗಾಗಿ ನಾವು ನಾವು ಕೊರೊನಾ ವೈರಸ್‌ಗಿಂತ ಹೆಚ್ಚು ತೀವ್ರವಾದ ಕಾಯಿಲೆಯಿಂದ ಪಾರಾಗಿದ್ದೇವೆ ಭಾವಿಸಿ ನಿಟ್ಟುಸಿರು ಬಿಡಬೇಕು’ ಎಂದು ಯಾರದೂ ಹೆಸರೆತ್ತದೇ ಸೂಚ್ಯವಾಗಿ ಹೇಳಿದರು.
ಆದರೆ ಈ ಹೇಳಿಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಹೇಳಿದ್ದು ಎಂದು ವಿಶ್ಲೇಷಿಸಲಾಗಿದೆ.‘ಎಲ್ಲಾ ಟ್ರಾಫಿಕ್ ದೀಪಗಳು ಒಂದೇ ಬಣ್ಣದಲ್ಲಿ ಒಂದೇ ಸಮಯದಲ್ಲಿ ಹೊಳೆಯುತ್ತಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದ ಅವರು, ಜನರು ಯೋಚಿಸಲು ಮತ್ತು ಅವರ ಆಯ್ಕೆಯನ್ನು ಆರಿಸಿಕೊಳ್ಳಲು ಸಮಯ ನೀಡಬೇಕು’ ಎಂದು ಮಾರ್ಮಿಕವಾಗಿ ನುಡಿದರು.