ಸಾರಾಂಶ
ನವದೆಹಲಿ : ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಅನುಮೋದನೆಯನ್ನು ನೀಡಿದೆ.
ಈ ಪ್ರಸ್ತಾಪವನ್ನು ಬಿಜೆಪಿಯಾದಿಯಾಗಿ ಎನ್‌ಡಿಎ ಮಿತ್ರಪಕ್ಷಗಳು ಸ್ವಾಗತಿಸಿದ್ದರೆ, ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ವಿಪಕ್ಷಗಳು ಟೀಕಿಸಿವೆ.
ಲೋಕಸಭೆಯ ಸಾರ್ವತ್ರಿಕ ಚುನಾವಣೆಗೂ ಮುನ್ನ ಅಂದರೆ, ಮಾರ್ಚ್‌ನಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಸದಸ್ಯರಾಗಿರುವ ಅತ್ಯುನ್ನತ ಸಮಿತಿ ವರದಿಯೊಂದನ್ನು ಸಲ್ಲಿಕೆ ಮಾಡಿತ್ತು. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಈ ವರದಿಯನ್ನು ಅಂಗೀಕರಿಸುವುದಾಗಿ ಕಾನೂನು ಸಚಿವಾಲಯ ಹೇಳಿತ್ತು. ಅದರಂತೆ, ಬುಧವಾರ ವರದಿಯನ್ನು ಅಂಗೀಕರಿಸಲಾಗಿದೆ.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕು. ಈ ಚುನಾವಣೆಗಳು ನಡೆದ 100 ದಿನಗಳೊಳಗೆ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕು ಎಂಬ ಅಂಶ ವರದಿಯಲ್ಲಿದೆ. 2029ರಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೂ ಮುನ್ನ ಸಂವಿಧಾನಕ್ಕೆ ಹಲವು ತಿದ್ದುಪಡಿಗಳು ಆಗಬೇಕಿವೆ. ಬಿಜೆಪಿಯೇತರ ಪಕ್ಷಗಳ ವಿರೋಧ ಇರುವುದರಿಂದ ಆ ಸವಾಲನ್ನು ಸರ್ಕಾರ ದಾಟಬೇಕಿದೆ.
ವರದಿಯಲ್ಲೇನಿದೆ?:
ತಾನು ಮಾಡಿರುವ ಶಿಫಾರಸುಗಳ ಬಗ್ಗೆ ಗಮನಹರಿಸಲು ಅನುಷ್ಠಾನ ಸಮಿತಿಯೊಂದನ್ನು ರಚನೆ ಮಾಡಬೇಕು. ರಾಜ್ಯ ಚುನಾವಣಾ ಆಯೋಗಗಳ ಜತೆಗೂಡಿ ಕೇಂದ್ರ ಚುನಾವಣಾ ಆಯೋಗವು ಏಕರೂಪದ ಮತದಾರರ ಪಟ್ಟಿ ಹಾಗೂ ಗುರುತಿನ ಚೀಟಿ ವಿತರಣೆ ಮಾಡಬೇಕು. ಒಂದು ದೇಶ ಒಂದು ಚುನಾವಣೆ ಅನುಷ್ಠಾನಕ್ಕೆ 18 ಸಾಂವಿಧಾನಿಕ ತಿದ್ದುಪಡಿಗಳು ಅವಶ್ಯ ಇವೆ. ಇವುಗಳಲ್ಲಿ ಬಹುತೇಕ ತಿದ್ದುಪಡಿಗಳಿಗೆ ರಾಜ್ಯಗಳ ವಿಧಾನಸಭೆಯ ಒಪ್ಪಿಗೆಯೇನೂ ಬೇಕಾಗಿಲ್ಲ. ಆದರೆ ಏಕರೂಪದ ಮತದಾರರ ಪಟ್ಟಿ ಹಾಗೂ ಮತದಾರರ ಗುರುತಿನ ಚೀಟಿ ನಿರ್ಧಾರಗಳಿಗೆ ಅರ್ಧದಷ್ಟು ರಾಜ್ಯಗಳ ಸಹಮತಿ ಅಗತ್ಯ ಎಂದು ವರದಿ ಹೇಳುತ್ತದೆ.
ಬಿಜೆಪಿಯ ಅಜೆಂಡಾ:
ಒಂದು ದೇಶ ಒಂದು ಚುನಾವಣೆ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆ ನಡೆದದ್ದು ಇದೆ. 2019 ಹಾಗೂ 2024ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಕುರಿತು ಭರವಸೆ ನೀಡಿತ್ತು. ಕಳೆದ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಬದ್ಧತೆ ವ್ಯಕ್ತಪಡಿಸಿದ್ದರು.
ಸಂಸತ್ತಲ್ಲಿ ಕಾಯ್ದೆ ಪಾಸು ಕಷ್ಟ ಕಷ್ಟ!
ಒಂದು ದೇಶ ಒಂದು ಚುನಾವಣೆ ಸಾಕಾರಕ್ಕೆ ಸಂವಿಧಾನದಲ್ಲಿ 18 ತಿದ್ದುಪಡಿಗಳನ್ನು ಮಾಡಬೇಕು. ಆ ಪೈಕಿ 8 ತಿದ್ದುಪಡಿಗಳಿಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅನುಮತಿ ಬೇಕು. ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ ಎನ್‌ಡಿಗೆ 2/3 ಬಹುಮತ ಬೇಕು. ಅಷ್ಟು ಬಹುಮತಕ್ಕೆ ಲೋಕಸಭೆಯಲ್ಲಿ 72 ಹಾಗೂ ರಾಜ್ಯಸಭೆಯಲ್ಲಿ 52 ಸ್ಥಾನಗಳ ಕೊರತೆಯನ್ನು ಎನ್‌ಡಿಎ ಎದುರಿಸುತ್ತಿದೆ.
ಮಹತ್ತರ ಹೆಜ್ಜೆಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವುದು ಭಾರತದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡುವತ್ತ ಇಟ್ಟ ಮಹತ್ತರ ಹೆಜ್ಜೆಯಾಗಿದೆ. - ನರೇಂದ್ರ ಮೋದಿ, ಪ್ರಧಾನಿ
ಜನರ ಗಮನ ಬೇರೆಡೆ ಸೆಳೆವ ತಂತ್ರ: ಖರ್ಗೆ
ನವದೆಹಲಿ: ಕೇಂದ್ರ ಸರ್ಕಾರದ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾಪ ಅಪ್ರಾಯೋಗಿಕ ಮತ್ತು ಚೀಪ್ ಗಿಮಿಕ್ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ಕಟುವಾಗಿ ಟೀಕಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಈ ಪರಿಕಲ್ಪನೆ ಅಪ್ರಾಯೋಗಿಕವಾಗಿದ್ದು, ಚುನಾವಣೆಗಳು ಸಮೀಪಿದ್ದಾಗ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ತಿರುಗಿಸಲು ಬಿಜೆಪಿ ಇಂತಹ ತಂತ್ರ ಹೂಡುತ್ತದೆ’ ಎಂದು ಟೀಕಿಸಿದ್ದಾರೆ.