ಸಾರಾಂಶ
ವಿಪಕ್ಷಗಳು ಪ್ರಗತಿಪರ ಶೈಕ್ಷಣಿಕ ಸುಧಾರಣೆಗಳನ್ನು ತಮ್ಮ ಹಳೆಯ ರಾಜಕೀಯ ಅಜೆಂಡಾಗಳಿಗಾಗಿ ತಿರುಚುತ್ತಿರುವುದು ದುರಾದೃಷ್ಟಕರ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕಿಡಿಕಾರಿದ್ದಾರೆ.
ನವದೆಹಲಿ: ಯುಜಿಸಿ ಕರಡು ನಿಯಮಗಳು ಉನ್ನತ ಶಿಕ್ಷಣದಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಎನ್ನುವ ಕಾರಣಕ್ಕೆ ಕರ್ನಾಟಕ ಸೇರಿದಂತೆ 6 ರಾಜ್ಯಗಳು ನಿಯಮದ ವಿರುದ್ಧ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ, ‘ವಿಪಕ್ಷಗಳು ಪ್ರಗತಿಪರ ಶೈಕ್ಷಣಿಕ ಸುಧಾರಣೆಗಳನ್ನು ತಮ್ಮ ಹಳೆಯ ರಾಜಕೀಯ ಅಜೆಂಡಾಗಳಿಗಾಗಿ ತಿರುಚುತ್ತಿರುವುದು ದುರಾದೃಷ್ಟಕರ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕಿಡಿಕಾರಿದ್ದಾರೆ.
ಯುಜಿಸಿ ಸಿದ್ಧಪಡಿಸಿರುವ ಕರಡು ನಿಯಮಕ್ಕೆ ಕರ್ನಾಟಕ ಸೇರಿ 6 ವಿಪಕ್ಷಗಳ ಆಡಳಿತದ ರಾಜ್ಯಗಳು ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದವು. ಜೊತೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ‘ ಇದು ಆರ್‌ಎಸ್‌ಎಸ್‌ನ ಒಂದೇ ಇತಿಹಾಸ, ಒಂದೇ ಸಂಪ್ರದಾಯ, ಒಂದೇ ಭಾಷೆ ಎನ್ನುವ ಕಾರ್ಯಸೂಚಿ ಹೇರುವ ಪ್ರಯತ್ನ’ ಎಂದಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ಮುಖೇನ ಪ್ರತಿಕ್ರಿಯಿಸಿರುವ ಸಚಿವ ಧರ್ಮೇಂದ್ರ ಪ್ರಧಾನ್, ‘ಲೋಕಸಭೆ ವಿಪಕ್ಷ ನಾಯಕರು ಸೇರಿದಂತೆ ಕೆಲವು ರಾಜಕೀಯ ನಾಯಕರು ತಮ್ಮ ಹಳೆಯ ರಾಜಕೀಯ ಅಜೆಂಡಾಗಳ ಕಾರಣಕ್ಕೆ ಶೈಕ್ಷಣಿಕ ಸುಧಾರಣೆಗಳನ್ನು ತಿರುಚುವುದು ದುರದೃಷ್ಟಕರ ಮತ್ತು ಆತಂಕಕಾರಿ. ವಿರೋಧಿಸುವ ಕಾರಣಕ್ಕೆ ಏನನ್ನಾದರೂ ವಿರೋಧಿಸುವುದು ಹವ್ಯಾಸವಾಗಿರಬಹುದು. ಆದರೆ ಅದು ಖಂಡಿತವಾಗಿಯೂ ಕ್ಷುಲ್ಲಕ ರಾಜಕೀಯ. ಸ್ವಯಂಘೋಷಿತ ಸಂವಿಧಾನ ಪ್ರತಿಪಾದಕ ರಾಹುಲ್ ಗಾಂಧಿಯವರು ತಮ್ಮ ಪೂರ್ವಾಭ್ಯಾಸ ಮಾಡಿದ ರಾಜಕೀಯ ಪ್ರದರ್ಶನಗಳನ್ನು ಪ್ರಾರಂಭಿಸುವ ಮೊದಲು ಕರಡು ನಿಯಮಗಳನ್ನು ಓದಬೇಕು’ ಎಂದು ತಿರುಗೇಟು ನೀಡಿದ್ದಾರೆ.