ಸಂಸತ್ತಲ್ಲಿ ಇಬ್ಬರುಎಂಪಿಗಳನ್ನು ತಳ್ಳಿ,ಬೀಳಿಸಿದ ಪ್ರಕರಣ : ರಾಹುಲ್‌ ಗಾಂಧಿವಿರುದ್ಧ ಎಫ್‌ಐಆರ್‌

| Published : Dec 20 2024, 12:48 AM IST / Updated: Dec 20 2024, 04:16 AM IST

ಸಂಸತ್ತಲ್ಲಿ ಇಬ್ಬರುಎಂಪಿಗಳನ್ನು ತಳ್ಳಿ,ಬೀಳಿಸಿದ ಪ್ರಕರಣ : ರಾಹುಲ್‌ ಗಾಂಧಿವಿರುದ್ಧ ಎಫ್‌ಐಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತ- ಪ್ರತಿಪಕ್ಷಗಳ ನಡುವೆ ಸೈದ್ಧಾಂತಿಕ, ರಾಜಕೀಯ ಸಮರಕ್ಕೆ ಸದಾ ಸಾಕ್ಷಿಯಾಗುವ ಸಂಸತ್‌ ಭವನ ಗುರುವಾರ ಹಿಂದೆಂದೂ ಕಂಡುಕೇಳರಿಯದ ಆಘಾತಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ.

 ನವದೆಹಲಿ : ಆಡಳಿತ- ಪ್ರತಿಪಕ್ಷಗಳ ನಡುವೆ ಸೈದ್ಧಾಂತಿಕ, ರಾಜಕೀಯ ಸಮರಕ್ಕೆ ಸದಾ ಸಾಕ್ಷಿಯಾಗುವ ಸಂಸತ್‌ ಭವನ ಗುರುವಾರ ಹಿಂದೆಂದೂ ಕಂಡುಕೇಳರಿಯದ ಆಘಾತಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ನೀಡಿದ್ದ ಹೇಳಿಕೆ ಪರ-ವಿರುದ್ಧವಾಗಿ ಗುರುವಾರ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ಪರಸ್ಪರ ತಳ್ಳಾಡಿಕೊಂಡು ದೈಹಿಕ ಸಂಘರ್ಷ ನಡೆಸಿದ್ದಾರೆ.

ಈ ಘಟನೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿ ಸಂಸದರನ್ನು ಬಲವಾಗಿ ತಳ್ಳಿದಾಗ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಆರೋಪ ತಳ್ಳಿಹಾಕಿರುವ ರಾಹುಲ್‌ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿ ಸದಸ್ಯರೇ ನಮ್ಮನ್ನು ತಳ್ಳಿ ಸದನ ಪ್ರವೇಶಕ್ಕೆ ಅಡ್ಡಿಪಡಿಸಿದರು. ಅಂಬೇಡ್ಕರ್‌ಗೆ ಅಮಿತ್‌ ಶಾ ಮಾಡಿದ ಅವಮಾನ ಪ್ರಕರಣದ ದಿಕ್ಕು ತಪ್ಪಿಸಲು ದಾಳಿಯ ನೆಪ ಹೆಣೆಯಲಾಗಿದೆ’ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಈ ನಡುವೆ, ಇಬ್ಬರು ಸಂಸದರಿಗೆ ಹಲ್ಲೆ ಮಾಡಿದ ಆರೋಪ ಸಂಬಂಧ ರಾಹುಲ್‌ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕಾಂಗ್ರೆಸ್‌ ಕೂಡ ಬಿಜೆಪಿ ಸಂಸದರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

ಈ ನಡುವೆ, ಮಹಿಳಾ ಬಿಜೆಪಿ ಸಂಸದರೊಬ್ಬರು ಕೂಡ ರಾಹುಲ್‌ ತಮ್ಮ ದೇಹ ತಾಗುವಂತೆ ನಿಂತು ಅಸಭ್ಯವಾಗಿ ವರ್ತಿಸಿದರು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದರ ನಡುವೆಯೇ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕೊಲೆ ಯತ್ನ ಹಾಗೂ ಹಲ್ಲೆ ದೂರು ನೀಡಿದೆ.

ಆಗಿದ್ದೇನು?:

ಸಂಸತ್ತಿನ ಹೊರಗಿನ ಮಕರ ದ್ವಾರದಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್‌. ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಯ ಪರ-ವಿರುದ್ಧ ಆಡಳಿತ ಹಾಗೂ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಕಾಂಗ್ರೆಸ್‌ ಸಂಸದರು ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ಸದಸ್ಯರು ಕಾಂಗ್ರೆಸ್‌ ಸಂವಿಧಾನ ವಿರೋಧಿ ಎಂದು ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದರು. ಪ್ರತಿಭಟನೆ ಬರೀ ದ್ವಾರಕ್ಕೆ ಸೀಮಿತವಾಗಿರದೇ ಪಕ್ಕದಲ್ಲಿದ್ದ ಎತ್ತರದ ಕಟ್ಟೆ ಹತ್ತಿ ಪ್ರತಿಭಟನೆ ಮಾಡುತ್ತಿದ್ದರು.

ಈ ವೇಳೆ ಉಭಯ ಪಕ್ಷಗಳ ಸಂಸದರು ಎದುರು ಬದುರಾದಾಗ ಗಲಾಟೆ ತೀವ್ರಗೊಂಡಿದೆ. ಸಂಸತ್ತಿನ ಮಕರದ್ವಾರಕ್ಕೆ ಅಡ್ಡ ನಿಂತು ಸಂಸದರು ಪ್ರತಿಭಟನೆ ನಡೆಯುವಾಗ ರಾಹುಲ್‌ ಗಾಂಧಿ ಅವರು ಸಂಸತ್ತಿನ ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಅವರನ್ನು ಬಿಜೆಪಿಯ ಕೆಲವು ಸಂಸದರು ತಳ್ಳಿ, ಸಂಸತ್‌ ಭವನದ ಒಳಗೆ ಹೋಗಲು ಅಡ್ಡಿಪಡಿಸಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ರಾಹುಲ್‌ ಗಾಂಧಿ ಕೂಡ ಬಿಜೆಪಿಗರನ್ನು ತಳ್ಳಿದರು ಎನ್ನಲಾಗಿದ್ದು, ಆಗ ಬಿಜೆಪಿ ಸಂಸದ ಮುಕೇಶ್ ರಜಪೂತ್ ಅವರು ಆಯತಪ್ಪಿ ಒಡಿಶಾದ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಮೇಲೆ ಬಿದ್ದಿದ್ದಾರೆ. ಸಾರಂಗಿ ಅವರ ತಲೆಗೆ ಆಗ ಗಾಯಗಳಾಗಿವೆ. ಅವರನ್ನು ಹಾಗೂ ರಜಪೂತ್‌ ಅವರನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಾರಂಗಿ ತಲೆಗೆ ಸ್ಟಿಚ್‌ ಹಾಕಲಾಗಿದೆ.

ರಾಹುಲ್‌ ತಳ್ಳಿದರು- ಸಾರಂಗಿ:

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ 69 ವರ್ಷದ ಸಾರಂಗಿ, ‘ನಮ್ಮನ್ನು ರಾಹುಲ್‌ ಗಾಂಧಿ ತಳ್ಳಿದರು. ಬಿದ್ದು ತಲೆಗೆ ಏಟಾಗಿದೆ’ ಎಂದರು. ರಜಪೂತ್‌ ಮಾತನಾಡಿ, ‘ನನ್ನನ್ನು ರಾಹುಲ್‌ ತಳ್ಳಿದಾಗ ನಾನು ಸಾರಂಗಿ ಮೇಲೆ ಬಿದ್ದೆ. ಆಗ ಸಾರಂಗಿ ಕೂಡ ಬಿದ್ದ ಕಾರಣ ಅವರ ತಲೆಗೆ ಪೆಟ್ಟಾಯಿತು’ ಎಂದರು.

ಬಿಜೆಪಿ ಮಹಿಳಾ ಸಂಸದೆ ಫಾಂಗೋನ್‌ ಕೊನ್ಯಾಕ್‌ ಮಾತನಾಡಿ, ‘ರಾಹುಲ್ ಬಲವಂತವಾಗಿ ಬಿಜೆಪಿಗರ ಗುಂಪಿನಲ್ಲಿ ನುಗ್ಗಿ ನನ್ನ ದೇಹ ತಾಗುವಂತೆ ನಿಂತರು. ಇದರಿಂದ ನನ್ನ ಗೌರವಕ್ಕೆ ಭಂಗ ಬಂದಿದೆ’ ಎಂದರು, ಇನ್ನೂ ಕೆಲವು ಕೇಂದ್ರ ಸಚಿವರು ರಾಹುಲ್‌ ದುರ್ವರ್ತನೆ ತೋರಿದರು ಎಂದು ಆರೋಪಿಸಿದರು.

ತಳ್ಳಿದ್ದು ಬಿಜೆಪಿಗರು- ರಾಗಾ:

ಆದರೆ ಆರೋಪ ನಿರಾಕರಿಸಿದರ ರಾಹುಲ್‌, ‘ನಾನು ಸಂಸದ. ನನಗೆ ಸಂಸತ್‌ ಭವನದಲ್ಲಿ ಪ್ರವೇಶಿಸುವ ಹಕ್ಕಿದೆ. ಪ್ರತಿಭಟನೆ ವೇಳೆ ಮಕರದ್ವಾರಕ್ಕೆ ಅಡ್ಡ ನಿಂತು ನನ್ನ ಪ್ರವೇಶವನ್ನು ಬಿಜೆಪಿಗರು ತಡೆದರು ಹಾಗೂ ತಳ್ಳಿದರು. ಆಗ ಪರಸ್ಪರ ತಳ್ಳಾಟ ನೂಕಾಟ ನಡೆಯಿತು’ ಎಂದರು.

ನನ್ನನ್ನೂ ತಳ್ಳಿದರು- ಖರ್ಗೆ:

ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದು, ‘ನನ್ನನ್ನೂ ಬಿಜೆಪಿ ಸದಸ್ಯರು ತಳ್ಳಿದರು. ಹೀಗಾಗಿ ನನ್ನ ಕಾಲಿಗೆ ಗಾಯವಾಗಿದ್ದು, ನಾನು ನಿಲ್ಲುವ ಬದಲು ಕುಳಿತು ಪ್ರತಿಭಟನೆ ನಡೆಸಿದೆ. ಇದು ನನ್ನ ಮೇಲೆ ಮಾತ್ರವಲ್ಲ, ವಿರೋಧ ಪಕ್ಷದ ನಾಯಕ, ರಾಜ್ಯಸಭೆ ಮತ್ತು ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ’ ಎಂದು ಲೋಕಸಭೆ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿಯಿಂದ ಆರೋಗ್ಯ ವಿಚಾರಣೆ:

ಪ್ರಧಾನಿ ನರೇಂದ್ರ ಮೋದಿ ಅವರು ಗಾಯಾಳು ಸಂಸದರಾದ ಸಾರಂಗಿ ಹಾಗೂ ರಜಪೂತ್‌ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.