ಸಾರಾಂಶ
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಭೆಯಲ್ಲಿ ಶುಕ್ರವಾರ ಕೋಲಾಹಲ ನಡೆದಿದ್ದು, 10 ಪ್ರತಿಪಕ್ಷದ ಸದಸ್ಯರನ್ನು ಶುಕ್ರವಾರ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಮಸೂದೆ ಅಧ್ಯಯನಕ್ಕೆ ಕಾಲಾವಕಾಶ ನೀಡುತ್ತಿಲ್ಲ ಎಂದು (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆಗೆ ಇಳಿದವು. ಆಗ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಹಾಗೂ ಅಪರಾಜಿತಾ ಸಾರಂಗಿ, ‘ಪಾಲ್ ವಿರುದ್ಧ ಅಸಂಸದೀಯ ಭಾಷೆ ಬಳಸುತ್ತಿದ್ದೀರಿ. ಇದು ಅಸಹ್ಯ’ ಎಂದರು. ಆಗ ಪ್ರತಿಪಕ್ಷದ ಸದಸ್ಯರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ದುಬೆ ಮಂಡಿಸಿದರು. ಕೊನೆಗೆ ಕಲ್ಯಾಣ ಬ್ಯಾನರ್ಜಿ, ಅಸಾದುದ್ದೀನ್ ಒವೈಸಿ ಸೇರಿ 10 ವಿಪಕ್ಷ ಸಂಸದರನ್ನು ಪಾಲ್ 1 ದಿನದ ಮಟ್ಟಿಗೆ ಸಸ್ಪೆಂಡ್ ಮಾಡಿದರು.ಈ ನಡುವೆ ಅಮಾನತು ಅಧಿಕಾರ ಜೆಪಿಸಿ ಅಧ್ಯಕ್ಷರಿಗೆ ಇಲ್ಲ ಎಂದು ಲೋಕಸಭೆ ಸಭಾಧ್ಯಕ್ಷರಿಗೆ ದೂರಲು ವಿಪಕ್ಷ ಸದಸ್ಯರು ನಿರ್ಧರಿಸಿದ್ದಾರೆ.
ಆಗಿದ್ದೇನು?:ಪ್ರತಿಪಕ್ಷ ಸದಸ್ಯರು ಕರಡು ಶಾಸನಕ್ಕೆ ಪ್ರಸ್ತಾಪಿಸಲಾದ ಬದಲಾವಣೆಗಳನ್ನು ಅಧ್ಯಯನ ಮಾಡಲು ಸಾಕಷ್ಟು ಸಮಯವನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ದೆಹಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ತ್ವರಿತವಾಗಿ ಅಂಗೀಕರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ತೀವ್ರ ವಾಗ್ವಾದಗಳು ನಡೆದು ಕಲಾಪವನ್ನು ಸ್ವಲ್ಪ ಕಾಲ ಮುಂದೂಡಲಾಯಿತು.
ಪುನಃ ಸಭೆ ಸೇರಿದ ಬಳಿಕ ಪ್ರಸ್ತಾವಿತ ತಿದ್ದುಪಡಿಗಳ ಕಲಂ-ವಾರು ಪರಿಶೀಲನೆಗಾಗಿ ಜ.27ರಂದು ನಿಗದಿಯಾಗಿದ್ದ ಸಭೆಯನ್ನು ಜ.30 ಅಥವಾ ಜ.31ಕ್ಕೆ ಮುಂದೂಡಬೇಕು ಎಂದು ಪ್ರತಿಪಕ್ಷ ಸದಸ್ಯರು ಒತ್ತಾಯಿಸಿದರು. ಜೆಪಿಸಿ ಅಧ್ಯಕ್ಷ ಪಾಲ್ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡಿದ ಪರಿಣಾಮ ಸಭೆಯಲ್ಲಿ ಬಿರುಸಿನ ವಾತಾವರಣ ಸೃಷ್ಟಿಯಾಯಿತು.ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ ನಂತರ ಕಳೆದ ವರ್ಷ ಆ. 8ರಂದು ಜೆಪಿಸಿಗೆ ಒಪ್ಪಿಸಲಾಗಿತ್ತು.