ಸಾರಾಂಶ
ಪ್ರಶ್ನೋತ್ತರ ಅವಧಿ ರದ್ದುಪಡಿಸಿ ಉತ್ತರ ಪ್ರದೇಶದ ಸಂಭಲ್ ಹಿಂಸಾಚಾರ, ಅದಾನಿ ವಿವಾದ, ಮಣಿಪುರ ಹಿಂಸಾಚಾರ ಪ್ರಕರಣದ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳು ಸಂಸತ್ತಿನಲ್ಲಿ ನಡೆಸುತ್ತಿರುವ ಗದ್ದಲ ಸತತ 4ನೇ ದಿನವಾದ ಶುಕ್ರವಾರ ಕೂಡಾ ಮುಂದುವರೆದಿದೆ
ನವದೆಹಲಿ: ಪ್ರಶ್ನೋತ್ತರ ಅವಧಿ ರದ್ದುಪಡಿಸಿ ಉತ್ತರ ಪ್ರದೇಶದ ಸಂಭಲ್ ಹಿಂಸಾಚಾರ, ಅದಾನಿ ವಿವಾದ, ಮಣಿಪುರ ಹಿಂಸಾಚಾರ ಪ್ರಕರಣದ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳು ಸಂಸತ್ತಿನಲ್ಲಿ ನಡೆಸುತ್ತಿರುವ ಗದ್ದಲ ಸತತ 4ನೇ ದಿನವಾದ ಶುಕ್ರವಾರ ಕೂಡಾ ಮುಂದುವರೆದಿದೆ. ಹೀಗಾಗಿ ಯಾವುದೇ ಕಲಾಪ ಸಾಧ್ಯವಾಗದೆ ಸೋಮವಾರಕ್ಕೆ ಕಲಾಪ ಮುಂದೂಡಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಸಮಾಜವಾದಿ ಪಕ್ಷದ ಸಂಸದರು ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಪ್ರಶ್ನೋತ್ತರಕ್ಕೂ ಅಡ್ಡಿಪಡಿಸಿದರು. ಹೀಗಾಗಿ ಲೋಕಸಭಾ ಸ್ಪಿಕರ್ 12 ಗಂಟೆಯವರೆಗೆ ಕಲಾಪ ಮುಂದೂಡಿದರು. ಮತ್ತೆ ಸದನ ಸೇರಿದಾಗಲೂ ಪ್ರತಿಭಟನೆ ಮುಂದುವರೆದ ಹಿನ್ನೆಲೆ ಸೋಮವಾರಕ್ಕೆ ಕಲಾಪ ಮುಂದೂಡಲಾಯಿತು.
ಮತ್ತೊಂದೆಡೆ ರಾಜ್ಯಸಭೆಯಲ್ಲೂ ಇದೇ ಬೆಳವಣಿಗೆ ನಡೆಯಿತು. ವಿಪಕ್ಷಗಳ ಪ್ರತಿಭಟನೆ ಕಾರಣಕ್ಕೆ ಪದೇ ಪದೇ ಕಲಾಪಗಳು ಮುಂದೂಡಿಕೆ ಆಗಿದ್ದಕ್ಕೆ ರಾಜ್ಯಸಭಾ ಸ್ಪೀಕರ್ ಜಗದೀಪ್ ಧನಖರ್ ಅಸಮಾಧಾನವನ್ನು ವ್ಯಕ್ತಪಡಿಸಿದರು. ‘ಪ್ರತಿಭಟನೆಯ ಕಾರಣಕ್ಕೆ, ಸಾರ್ವಜನಿಕ ಕೆಲಸಕ್ಕೆ ಬದ್ಧವಾಗಿರಬೇಕಿದ್ದ ನಾವು ಮೂರು ಕೆಲಸದ ದಿನಗಳನ್ನು ಕಳೆದುಕೊಂಡಿದ್ದೇವೆ. ಸಮಯ , ಅವಕಾಶ, ಪ್ರಶ್ನೋತ್ತರ ಸಮಯದ ನಷ್ಟವು ಸಾರ್ವಜನಿಕರಿಗೆ ದೊಡ್ಡ ನಷ್ಟವನ್ನು ಉಂಟು ಮಾಡುತ್ತಿದೆ. ನಮ್ಮ ಕಾರ್ಯಗಳು ಜನಕೇಂದ್ರಿತವಾಗಿಲ್ಲ. ಅದು ಸಾರ್ವಜನಿಕ ಅಸಹ್ಯಕರವಾಗಿದೆ. ಜನರು ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದಾರೆ. ನಾವು ವಾಸ್ತವಿಕವಾಗಿ ನಗೆಪಾಟಲಿಗೀಡಾಗಿದ್ದೇವೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಕಲಾಪ ಮುಂದೂಡಲಾಯಿತು.