ಸಾರಾಂಶ
ಟೊರಾಂಟೋದಲ್ಲಿ ನಡೆದ ಭಾರತ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಖಲಿಸ್ತಾನಿ ಉಗ್ರರು ಭಾರತದ ಧ್ವಜವನ್ನು ಹರಿದು ಹಾಕಿ 'ಭಾರತಕ್ಕೆ ಮರಳಿ' ಎಂದು ಘೋಷಣೆ ಕೂಗಿದ್ದಾರೆ.
ಟೊರಾಂಟೋ: ಕೆನಡಾದ ಟೊರಾಂಟೋದಲ್ಲಿ ನಡೆದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಖಲಿಸ್ತಾನಿ ಉಗ್ರರು, ಭಾರತದ ತ್ರಿವರ್ಣ ಧ್ವಜವನ್ನು ಹರಿದು ಹಾಕಿ‘ ಭಾರತಕ್ಕೆ ಮರಳಿ’ ಎನ್ನುವ ಘೋಷಣೆ ಕೂಗಿದ ಘಟನೆ ನಡೆದಿದೆ.
ಟೊರಾಂಟೋದ ಸಿಟಿ ಹಾಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಬಿಗಿ ಭದ್ರತೆಯೊಂದಿಗೆ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಖಲಿಸ್ತಾನಿ ಉಗ್ರರು ಭಾರತಕ್ಕೆ ಮರಳಿ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಮಾತ್ರವಲ್ಲದೇ, ಚಾಕುವಿನಿಂದ ತ್ರಿವರ್ಣ ಧ್ವಜವನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ.
==
ಅಕ್ಟೋಬರ್‌ನಲ್ಲಿ ಬಿಎಸ್‌ಎನ್ಎಲ್ 4ಜಿ ಸೇವೆ ಆರಂಭ?
ನವದೆಹಲಿ: ದೇಶದಲ್ಲಿನ ಟೆಲಿಕಾಂ ಕ್ಷೇತ್ರ ಈಗಾಗಲೇ 5ಜಿ ಬಳಿಕ 6ಜಿ ಕಡೆಗೆ ಕೆಲಸ ಆರಂಭಿಸಿದ್ದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ 4ಜಿ ಇಂಟರ್ನೆಟ್ ಸೇವೆಯನ್ನು ಬರುವ ಅಕ್ಟೋಬರ್‌ನಲ್ಲಿ ಆರಂಭಿಸುವ ಸಾಧ್ಯತೆ ಇದೆ. ಇದಕ್ಕಾಗಿ ಈಗಾಗಲೇ ಬಹುತೇಕ ಪರೀಕ್ಷೆ ಹಾಗೂ ಪ್ರಯೋಗಗಳನ್ನು ಬಿಎಸ್‌ಎನ್‌ಎಲ್ ಮುಗಿಸಿದ್ದು, ಎಲ್ಲ ಪರೀಕ್ಷೆಗಳಲ್ಲಿಯೂ ಫಲಿತಾಂಶ ಸಮಾಧಾನಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 4ಜಿ ನೆಟ್‌ವರ್ಕ್‌ಗಾಗಿಯೇ ಈಗಾಗಲೇ ದೇಶಾದ್ಯಂತ 25000ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಲಾಗಿದ್ದು, ತನ್ನ ಗ್ರಾಹಕರಿಗೆ 4ಜಿ ಸಿಮ್‌ಗಳನ್ನು ಬಿಎಸ್‌ಎನ್‌ಎಲ್ ವಿತರಿಸುತ್ತಿದೆ. ಈ ನಡುವೆ 2024ರವರೆಗೆ ಬಿಎಸ್‌ಎನ್‌ಎಲ್ 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ.
==
ಬಿಜೆಪಿ ಜೊತೆ ರಹಸ್ಯ ಸಂಬಂಧ ಅಗತ್ಯವಿಲ್ಲ: ಸಿಎಂ ಸ್ಟಾಲಿನ್ ಸ್ಪಷ್ಟನೆ
ಚೆನ್ನೈ: ‘ಆಡಳಿತರೂಢ ಡಿಎಂಕೆಗೆ ಬಿಜೆಪಿ ಜೊತೆಗೆ ಯಾವುದೇ ರಹಸ್ಯ ಸಂಬಂಧದ ಅಗತ್ಯವಿಲ್ಲ’ ಎಂದು ಡಿಎಂಕೆ ನಾಯಕ, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾನುವಾರ ಇಲ್ಲಿ ನಡೆದ ಮಾಜಿ ಸಿಎಂ ಕರುಣಾನಿಧಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಡಿಎಂಕೆ ರಹಸ್ಯ ಮೈತ್ರಿ ಮಾಡಿಕೊಂಡಿದೆ ಎಂದು ಎಐಎಡಿಎಂಕೆ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಟಾಲಿನ್, ಅಧಿಕಾರಕ್ಕಾಗಿ ನಾವು ಎಂದಿಗೂ ಸಿದ್ಧಾಂತದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಅದು ನಮ್ಮ ಬದ್ಧತೆ ಎಂದರು. ಇದೇ ವೇಳೆ ಕಾರ್ಯಕ್ರಮಕ್ಕೆ ಬರುವಂತೆ ನೀಡಿದ ಆಹ್ವಾನವನ್ನು ಮರುಮಾತಿಲ್ಲದೇ ರಾಜ್‌ನಾಥ್ ಸಿಂಗ್ ಸ್ವೀಕರಿಸಿದರು. ತಮ್ಮ ನಿದ್ದೆಯನ್ನೂ ಬದಿಗೊತ್ತಿ ಚೆನ್ನೈಗೆ ಆಗಮಿಸಿದರು. ಅವರ ಭಾಷಣ ಇತಿಹಾಸದ ಪುಟಗಳಲ್ಲಿ ಸೇರುವಂತಿತ್ತು ಎಂದು ಸ್ಟಾಲಿನ್ ಹೊಗಳಿದರು.
==
ತ್ರಿವಳಿ ತಲಾಖ್ ರದ್ಧತಿಯಿಂದ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ: ಕೇಂದ್ರ
ನವದೆಹಲಿ: ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಎಂದು ಪರಿಗಣಿಸುವ ಸಂಬಂಧ 2019ರಲ್ಲಿ ತಾನು ಜಾರಿಗೊಳಿಸಿದ ಕಾನೂನನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಈ ಪದ್ಧತಿ ಮದುವೆಯ ಸಾಮಾಜಿಕ ವ್ಯವಸ್ಥೆಗೆ ತ್ರಿವಳಿ ತಲಾಖ್ ಮಾರಕವಾಗಿತ್ತು ಎಂದು ಹೇಳಿದೆ.
ತ್ರಿವಳಿ ತಲಾಖ್ ರದ್ದುಗೊಳಿಸಿದ ಕಾನೂನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಅಫಿಡವಿಟ್ ರೂಪದಲ್ಲಿ ಸುಪ್ರೀಂಕೋರ್ಟ್‌ಗೆ ಉತ್ತರಿಸಿರುವ ಕೇಂದ್ರ ಸರ್ಕಾರ, ‘2017ರಲ್ಲೇ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ಪದ್ಧತಿಯನ್ನು ಬದಿಗೊತ್ತಿದ್ದರೂ ಅದರಿಂದ ವಿಚ್ಚೇದನಗಳ ಸಂಖ್ಯೆ ಕಡಿಮೆ ಆಗಿರಲಿಲ್ಲ. ಹೀಗಾಗಿ ತ್ರಿವಳಿ ತಲಾಖ್‌ನಿಂದ ವಿವಾಹಿತ ಮುಸ್ಲಿಂ ಮಹಿಳೆಯರು ವಿಚ್ಚೇದನ ಒಳಗಾಗುವುದರಿಂದ ರಕ್ಷಿಸಲು ಕೇಂದ್ರ ಅವಿರೋಧ ಆಯ್ಕೆ ಕಾನೂನನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯು ಮುಸ್ಲಿಂ ಮಹಿಳೆಯರ ಲಿಂಗ ಸಮಾನತೆ ಮತ್ತು ಅವರ ಸಬಲೀಕರಣಕ್ಕೆ ಸಹಾಯವಾಗುತ್ತದೆ’ ಎಂದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
2017ರ ಆಗಸ್ಟ್ 23ರಲ್ಲಿ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ವಿವಿಧ ಸಂಘಟನೆಗಳು 2019ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.