ಸಾರಾಂಶ
ನವದೆಹಲಿ: ಉಷ್ಣಹವೆಯಿಂದಾಗಿ ಜಾಗತಿಕವಾಗಿ ವಾರ್ಷಿಕ 1.53 ಲಕ್ಷ ಹೆಚ್ಚುವರಿಯಾಗಿ ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ಭಾರತದ ಪಾಲೇ ಶೇ.20ರಷ್ಟಿದೆ ಎಂದು ವರದಿಯೊಂದು ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಆಸ್ಟ್ರೇಲಿಯಾ ಮೊನಾಶ್ ವಿಶ್ವವಿದ್ಯಾನಿಲಯದ ಪಿಲೋಎಸ್ ಮೆಡಿಸಿನ್ ಸಂಶೋಧನಾ ವರದಿ, ಜಾಗತಿಕವಾಗಿ ಉಷ್ಣಹವೆಯಿಂದ ವಾರ್ಷಿಕವಾಗಿ 1.53 ಲಕ್ಷ ಮಂದಿಗೂ ಅಧಿಕ ಮಂದಿ ಹೆಚ್ಚುವರಿಯಾಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಶೇ.20ರಷ್ಟು ಪಾಲಿನೊಂದಿಗೆ ಭಾರತ ಮೊದಲ ಸ್ಥಾನದಲ್ಲಿದೆ. ಚೀನಾ ಶೇ.14 ಮತ್ತು ರಷ್ಯಾ ಶೇ.8ರಷ್ಟಿದ್ದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಸಂಶೋಧನಾ ವರದಿಯಲ್ಲಿ 1990ರಿಂದ 2019ರವರೆಗೆ ದತ್ತಾಂಶವನ್ನು ಸಂಗ್ರಹಿಸಲಾಗಿದ್ದು, ಅದರಂತೆ ಜಾಗತಿಕವಾಗಿ ಪ್ರತಿ 10 ಲಕ್ಷ ಮಂದಿಗೆ ಉಷ್ಣಹವೆಯಿಂದಾಗಿ ಪ್ರತಿವರ್ಷ 236 ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಭಾಗ ಒಣ ಹವಾಮಾನ ಇರುವ ಮತ್ತು ಕಡಿಮೆ ತಲಾದಾಯ ಹೊಂದಿರುವ ದೇಶಗಳಲ್ಲೇ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದೆ.
ಈ ಅವಧಿಯಲ್ಲಿ ವಾರ್ಷಿಕವಾಗಿ ಉಷ್ಣಹವೆಯಿರುವ ಸರಾಸರಿ ದಿನಗಳ ಸಂಖ್ಯೆ 13.4ರಿಂದ 13.7ಕ್ಕೆ ಏರಿಕೆಯಾಗಿದೆ. ಅಲ್ಲದೆ ಪ್ರತಿ 10 ವರ್ಷಕ್ಕೆ 0.35 ಡಿಗ್ರಿ ತಾಪಮಾನ ಏರುತ್ತಿದೆ ಎಂದು ಸಂಶೋಧನೆ ಉಲ್ಲೇಖಿಸಿದೆ.