ಮೊದಲ ಬಾರಿ ಜೈಲು ಸೇರಿದವರಿಗೆ ಇನ್ನು 3 ತಿಂಗಳಲ್ಲಿ ಬಿಡುಗಡೆ ಭಾಗ್ಯ : ಸುಪ್ರೀಂಕೋರ್ಟ್‌ ಮಹತ್ವದ ಆದೇಶ

| Published : Aug 25 2024, 01:50 AM IST / Updated: Aug 25 2024, 05:01 AM IST

ಸಾರಾಂಶ

ವಿಚಾರಣಾಧೀನ ಕೈದಿಗಳಿಂದ ದೇಶದ ಜೈಲುಗಳು ತುಂಬಿ ತುಳುಕುತ್ತಿರುವಾಗಲೇ, ಜು.1ರಿಂದ ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಕ್ರಿಮಿನಲ್‌ ಕಾನೂನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌)ಯನ್ನು ಪೂರ್ವಾನ್ವಯವಾಗುವಂತೆ ಜಾರಿಗೆ ತರುವ ಸಂಬಂಧ ಸುಪ್ರೀಂಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ನವದೆಹಲಿ: ವಿಚಾರಣಾಧೀನ ಕೈದಿಗಳಿಂದ ದೇಶದ ಜೈಲುಗಳು ತುಂಬಿ ತುಳುಕುತ್ತಿರುವಾಗಲೇ, ಜು.1ರಿಂದ ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಕ್ರಿಮಿನಲ್‌ ಕಾನೂನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌)ಯನ್ನು ಪೂರ್ವಾನ್ವಯವಾಗುವಂತೆ ಜಾರಿಗೆ ತರುವ ಸಂಬಂಧ ಸುಪ್ರೀಂಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ವಿಚಾರಣಾಧೀನ ಕೈದಿಗಳಾಗಿ ಜೀವನದಲ್ಲಿ ಮೊದಲ ಬಾರಿ ಜೈಲಿಗೆ ತಳ್ಳಲ್ಪಟ್ಟವರು ತಮಗೆ ತೀರ್ಪಿನ ಬಳಿಕ ಆಗಬಹುದಾದ ಗರಿಷ್ಠ ಶಿಕ್ಷೆಯ ಪೈಕಿ ಮೂರನೇ ಒಂದರಷ್ಟನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದರೆ, ಅಂಥವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಬಿಎನ್‌ಎಸ್‌ಎಸ್‌ನ ಸೆಕ್ಷನ್‌ 479 ಹೇಳುತ್ತದೆ. ಸುಪ್ರೀಂಕೋರ್ಟ್‌ನ ಆದೇಶದಿಂದಾಗಿ ಅನೇಕ ವರ್ಷಗಳಿಂದ ಜೈಲುಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಬಿಡುಗಡೆಯ ಭಾಗ್ಯ ದೊರೆತಂತಾಗಿದೆ.

ಜೈಲುಗಳು ಕೈದಿಗಳಿಂದ ತುಳುಕುತ್ತಿವೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಬಿಎನ್‌ಎಸ್‌ಎಸ್‌ ಅನ್ನು ಎಲ್ಲ ಕೈದಿಗಳಿಗೂ ಅನ್ವಯಿಸಬೇಕು. ಯಾವಾಗ ಬಂಧನವಾಗಿದೆ ಅಥವಾ ಯಾವಾಗ ಜೈಲಿಗೆ ಹೋಗಿದ್ದಾರೆ ಎಂಬುದನ್ನು ಗಣನೆಗೆ ತೆಗದುಕೊಳ್ಳುವಂತಿಲ್ಲ ಎಂದು ಹೇಳಿತು.

ಮುಂದಿನ ಮೂರು ತಿಂಗಳೊಳಗೆ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಜೈಲು ವರಿಷ್ಠಾಧಿಕಾರಿಗಳು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಫಲಿತಾಂಶವನ್ನು ಸಂಬಂಧಿಸಿದ ರಾಜ್ಯ ಇಲಾಖೆಗಳಿಗೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಂದೀಪ್‌ ಕೊಹ್ಲಿ ಅವರಿದ್ದ ಪೀಠ ಸೂಚನೆ ನೀಡಿತು.

ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ, ಸಿಆರ್‌ಪಿಸಿ ಸೆಕ್ಷನ್‌ 436ಎ ಬದಲಾಗಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 479 ರೂಪಿಸಲಾಗಿದೆ. ಈ ಕಾಯ್ದೆ 2024ರ ಜು.1ರಿಂದ ಜಾರಿಗೆ ಬಂದಿದ್ದರೂ, ಎಲ್ಲ ವಿಚಾರಣಾ ಕೈದಿಗಳಿಗೂ ಅನ್ವಯವಾಗಲಿದೆ. ಜು.1ಕ್ಕೆ ಮುನ್ನ ದಾಖಲಾದ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.