ಸಾರಾಂಶ
ಶನಿವಾರ 76 ನೇ ಗಣರಾಜ್ಯೋತ್ಸವದ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ,ಎಸ್. ಖೇಹರ್, ಸುಜುಕಿ ಮುಖ್ಯಸ್ಥ ಒಸಾಮು ಸುಜುಕಿ, ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಸೇರಿದಂತೆ 139 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ನವದೆಹಲಿ: ಶನಿವಾರ 76 ನೇ ಗಣರಾಜ್ಯೋತ್ಸವದ ಮುನ್ನಾದಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ,ಎಸ್. ಖೇಹರ್, ಸುಜುಕಿ ಮುಖ್ಯಸ್ಥ ಒಸಾಮು ಸುಜುಕಿ, ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಸೇರಿದಂತೆ 139 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 7 ಜನರಿಗೆ ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಶಸ್ತಿ ಪಟ್ಟಿ ಹೊಂದಿದೆ. ಭಾರತಕ್ಕೆ ಮಾರುತಿ ಸುಝುಕಿ ಕಾರು ಪರಿಚಯಿಸಿದ ಜಪಾನ್ ಉದ್ಯಮಿ ಒಸಾಮು ಸುಜುಕಿ, ಮಲಯಾಳಂ ಸಾಹಿತ್ಯದ ದಂತಕಥೆ ಎಂಟಿ ವಾಸುದೇವನ್ ನಾಯರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.
30 ತೆರೆಮರೆ ಸಾಧಕರಿಗೆ ಪದ್ಮಶ್ರೀ
ನವದೆಹಲಿ: 2025ರ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಎಲೆಮರೆ ಕಾಯಿಯಂತಿದ್ದ 30 ಮಂದಿ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬ್ರೆಜಿಲ್‌ನ ಹಿಂದೂ ಆಧ್ಯಾತ್ಮಿಕ ನಾಯಕ ಜೋನಾಸ್ ಮಾಸೆಟ್ಟಿ, ಭಾರತದ ಪರಂಪರೆಯ ಬಗ್ಗೆ ಸಾಹಿತ್ಯ ಕೃಷಿ ಮಾಡಿರುವ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ದಂಪತಿಗಳು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಕ್ತಿ ಗಾಯಕ ಭೇರು ಸಿಂಗ್ ಚೌಹಾಣ್, ಪತ್ರಕರ್ತ ಭೀಮ್ ಸಿಂಗ್ ಭವೇಶ್, ಕಾದಂಬರಿಕಾರ ಜಗದೀಶ್ ಜೋಶಿಲಾ, ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ನೀರ್ಜಾ ಭಟ್ಲಾ ಮತ್ತು ಕುವೈತ್‌ನ ಯೋಗಪಟು ಶೈಖಾ ಎಜೆ ಅಲ್ ಸಬಾ ಕೂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೋವಾದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ 100 ವರ್ಷದ ಲಿಬಿಯಾ ಲೋಬೋ, ಪುರುಷ ಪ್ರಧಾನವಾಗಿದ್ದ ಢಾಕ್ ವಾದ್ಯದಲ್ಲಿ 150 ಮಹಿಳೆಯರಿಗೆ ತರಬೇತಿ ನೀಡಿ ಕ್ರಾಂತಿ ಮಾಡಿದ ಪಶ್ಚಿಮ ಬಂಗಾಳದ ಢಾಕ್ ವಾದಕ ಗೋಕುಲ ಚಂದ್ರ ಡೇ (57), ಅಳಿವಿನಂಚಿನಲ್ಲಿದ್ದ ಮಾಹೇಶ್ವರಿ ಕ್ರಾಫ್ಟ್ ಅನ್ನು ಉಳಿಸುವುದಕ್ಕೋಸ್ಕರ ಮಧ್ಯಪ್ರದೇಶದ ಮಹೇಶ್ವರದಲ್ಲಿ ಕೈಮಗ್ಗ ಶಾಲೆಯನ್ನು ಪ್ರಾರಂಭಿಸಿ, ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿದ ಸೈಲಿ ಹೋಳ್ಕರ್ (82) ಅವರು ಸಹ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.