ಸಾರಾಂಶ
ಇನ್ನೆರಡು ವಾರಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ದೆಹಲಿಯಲ್ಲಿ ಬಿಜೆಪಿ 3ನೇ ಹಂತದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತ್ತೆ ಕೆಲವು ಭರವಸೆಗಳನ್ನು ಘೋಷಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 3 ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು ಇದರಲ್ಲಿ ಸೇರಿವೆ.
ನವದೆಹಲಿ: ಇನ್ನೆರಡು ವಾರಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ದೆಹಲಿಯಲ್ಲಿ ಬಿಜೆಪಿ 3ನೇ ಹಂತದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತ್ತೆ ಕೆಲವು ಭರವಸೆಗಳನ್ನು ಘೋಷಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 3 ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು, 1,700 ಅನಧಿಕೃತ ಕಾಲೋನಿಗಳ ನಿವಾಸಿಗಳಿಗೆ ಅದರ ಮಾಲೀಕತ್ವದ ಹಕ್ಕು ನೀಡುವುದು, ‘ಅಗತ್ಯ ಇರುವ’ ವಿದ್ಯಾರ್ಥಿಗಳಿಗೆ 4000 ರು.ವರೆಗೆ ಮೆಟ್ರೋ ಉಚಿತ ಪ್ರಯಾಣ ಇದರಲ್ಲಿ ಸೇರಿವೆ.
ಈ ಭರವಸೆಗಳನ್ನೊಳಗೊಂಡ 3ನೇ ಹಂತದ ಸಂಕಲ್ಪ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಬಿಡುಗಡೆಗೊಳಿಸಿದರು.
ಈ ವೇಳೆ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ವಾಗ್ದಾಳಿ ನಡೆಸಿದ ಶಾ, ಅವರನ್ನು ಕೊಟ್ಟ ಭರವಸೆಗಳನ್ನು ಈಡೇರಿಸದ ಸುಳ್ಳುಗಾರ ಎಂದು ಕರೆದರು. ಜತೆಗೆ, ‘ಸುಳ್ಳು ಹೇಳುವವರು ಹಾಗೂ ಮೋಸಗಾರರಿಂದ ಮುಕ್ತಿ ಪಡೆಯುವುದೇ ಬಹುದೊಡ್ಡ ಚುನಾವಣಾ ಸವಾಲು’ ಎನ್ನುತ್ತಾ, ದೆಹಲಿಯ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಮಾಡಿದ ಖರ್ಚಿನ ಲೆಕ್ಕವನ್ನೂ ನೀಡಿದರು.
ಹೊಸ ಭರವಸೆಗಳು ಯಾವುವು?:- 3 ವರ್ಷಗಳೊಳಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು
- 1,700 ಅನಧಿಕೃತ ಕಾಲೋನಿಗಳ ನಿವಾಸಿಗಳಿಗೆ ಅದರ ಮಾಲೀಕತ್ವದ ಹಕ್ಕು ನೀಡುವ ಮೂಲಕ ಅವರು ಅದನ್ನು ಮಾರುವ, ಕೊಳ್ಳುವ ಅಥವಾ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಡುವುದು
- ವಾರ್ಷಿಕವಾಗಿ 4 ಸಾವಿರ ರು.ವರೆಗೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ
- ದಿನಗೂಲಿಯವರು ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಹಲವು ನೀತಿಗಳು ಹಾಗೂ ಕ್ರಮಗಳನ್ನು ಕೈಗೊಳ್ಳುವುದು
- ದಿನಗೂಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ. 10 ಲಕ್ಷ ರು. ವರೆಗೆ ವಿಮೆ, 5 ಲಕ್ಷ ರು. ಅಪಘಾತ ವೆಚ್ಚ ಭರಿಸುವ ಭರವಸೆ
- ಪಾರದರ್ಶಕವಾಗಿ 50 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ, 20 ಲಕ್ಷ ಸ್ವಯಂ ಉದ್ಯೋಗ ಸೃಷ್ಟಿ
- ಭವ್ಯ ಮಹಾಭಾರತ ಕಾರಿಡಾರ್ ನಿರ್ಮಾಣ