ಸಾರಾಂಶ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮೂಲದ ಕುಶ್ ದೇಸಾಯಿ ಅವರನ್ನು ತಮ್ಮ ಉಪ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಇನ್ನೊಂದೆಡೆ ಪೀಟ್ ಹೆಗ್ಸೆತ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ.
ಪತ್ರಕರ್ತರಾಗಿದ್ದ ದೇಸಾಯಿ ಈ ಮೊದಲು 2024ರ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಉಪ ಸಂವಹನ ನಿರ್ದೇಶಕರಾಗಿ ಹಾಗೂ ಪಕ್ಷದ ಸಂವಹನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಂತೆಯೇ, ಅಮೆರಿಕದ ರಣರಂಗವೆಂದೇ ಕರೆಯಲಾಗುವ 7 ರಾಜ್ಯಗಳ ಸಂವಹನ ನಿರ್ದೇಶಕರಾಗಿದ್ದ ಅನುಭವವನ್ನೂ ಇವರು ಹೊಂದಿದ್ದಾರೆ.
ಇನ್ನು ರಕ್ಷಣಾ ಸಚಿವ ಹುದ್ದೆಗೆ ಪೀಟ್ ಹೆಗ್ಸತ್ ಅವರ ನೇಮಕಕ್ಕೆ ಚುನಾವಣೆ ನಡೆದಾಗ 100 ಸೆನೆಟ್ ಸದಸ್ಯರು ಮತ ಹಾಕಿದಾಗ ಫಲಿತಾಂಶ 50:50 ಟೈ ಆಯಿತು. ಆಗ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪೀಟ್ ಪರ ಟೈಬ್ರೆಕರ್ ಮತ ಹಾಕಿ ಅವರ ಗೆಲುವಿಗೆ ಕಾರಣರಾರು.
ಅತ್ತ ಲೈಂಗಿಕ ದೌರ್ಜನ್ಯ, ಅತಿಯಾದ ಮದ್ಯ ಸೇವನೆ, ನಿಧಿಗಳ ಹಣಕಾಸು ದುರುಪಯೋಗ, ಮಹಿಳೆಯರ ಅಪಮಾನದ ಆರೋಪಗನ್ನು ಹೆಗ್ಸೆತ್ ಎದುರಿಸುತ್ತಿದ್ದಾರೆ. ಈ ಆರೋಪಗಳು ಹಾಗೂ ಅನುಭವದ ಕೊರತೆಯ ಹೊರತಾಗಿಯೂ ಹೆಗ್ಸೆತ್ ಪರವಾಗಿ ಮತ ಚಲಾಯಿಸಿ ಅವರನ್ನು ಆಯ್ಕೆ ಮಾಡಲಾಗಿದೆ.