ಸಾರಾಂಶ
ವಾರಾಣಸಿ: ಪದ್ಮಶ್ರೀ ಪುರಸ್ಕೃತ ಆಧ್ಯಾತ್ಮಿಕ ಗುರು, ಯೋಗ ಸಾಧಕ ಬಾಬಾ ಶಿವಾನಂದ (128) ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಶನಿವಾರ ರಾತ್ರಿ ನಿಧನರಾದರು.
ಅವರನ್ನು ಏ.30ರಂದು ವಾರಾಣಸಿಯ ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೇ 3ರಂದು ನಿಧನರಾಗಿದ್ದಾರೆ. ಬಾಬಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ‘ಅವರ ನಿಧನದಿಂದಾಗಿ ತೀವ್ರ ದುಃಖವಾಗಿದೆ. ಯೋಗ ಸಾಧನೆಗೆ ಮೀಸಲಾಗಿದ್ದ ಅವರ ಜೀವನವು ದೇಶದ ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ. ಅವರ ನಿರ್ಗಮನ ತುಂಬಲಾಗದ ನಷ್ಟ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅರ್ಧ ಹೊಟ್ಟೆ ತುಂಬುವಷ್ಟು ಮಾತ್ರ ಆಹಾರ ಸೇವನೆ:1896ರ ಆ.8ರಂದು ಇಂದಿನ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯಲ್ಲಿ ಜನಿಸಿದ ಬಾಬಾ ಶಿವಾನಂದ ಅವರು ಕೇವಲ 6 ವರ್ಷದವರಾಗಿದ್ದಾಗ ಹಸಿವಿನಿಂದ ತಮ್ಮ ಹೆತ್ತವರನ್ನು ಕಳೆದುಕೊಂಡರು. ಅಂದಿನಿಂದ ಅರ್ಧ ಹೊಟ್ಟೆ ತುಂಬುವಷ್ಟು ಆಹಾರ ಮಾತ್ರ ಸೇವಿಸುತ್ತಿದ್ದರು. ನಂತರ ಓಂಕಾರಾನಂದರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಮತ್ತು ಯೋಗ ಶಿಕ್ಷಣ ಪಡೆದರು. ಯೋಗ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಪರಿಗಣಿಸಿ 2022ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.