ಸಾರಾಂಶ
ಕಳೆದ ಕೆಲ ದಿನಗಳಿಂದ ಪರಸ್ಪರರ ಮೇಲೆ ದಾಳಿ ಮಾಡಿಕೊಂಡು ಯೋಧರು, ಕ್ರಿಕೆಟಿಗರು, ಜನಸಾಮಾನ್ಯರು ಸೇರಿದಂತೆ ಹಲವರ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ.
ಇಸ್ಲಾಮಾಬಾದ್ : ಕಳೆದ ಕೆಲ ದಿನಗಳಿಂದ ಪರಸ್ಪರರ ಮೇಲೆ ದಾಳಿ ಮಾಡಿಕೊಂಡು ಯೋಧರು, ಕ್ರಿಕೆಟಿಗರು, ಜನಸಾಮಾನ್ಯರು ಸೇರಿದಂತೆ ಹಲವರ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ.
ಕತಾರ್ ಮಧ್ಯಸ್ಥಿಕೆಯಲ್ಲಿ ಅದರ ರಾಜಧಾನಿ ದೋಹಾದಲ್ಲಿ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮತ್ತು ಆಫ್ಘನ್‌ನ ಹಂಗಾಮಿ ರಕ್ಷಣಾ ಸಚಿವ ಮುಲ್ಲಾ ಯಾಕೂಬ್ ನಡುವೆ ನಡೆದ ಮಾತುಕತೆಯಲ್ಲಿ, ತಕ್ಷಣದಿಂದ ಕದನವಿರಾಮ ಜಾರಿ ಮತ್ತು ಶಾಶ್ವತ ಶಾಂತಿ ಸ್ಥಾಪನೆಗೆ ಮಾರ್ಗಗಳನ್ನು ಕಂಡುಕೊಳ್ಳುವ ತೀರ್ಮಾನಕ್ಕೆ ಬರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜತೆಗೆ ಶಾಂತಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಲು ಮುಂದಿನ ದಿನಗಳಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆಯಲಿವೆ ಎನ್ನಲಾಗಿದೆ.ತಾಲಿಬಾನಿಗಳು ಪಾಕ್ ಅಸ್ಥಿರತೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕಳೆದ ವಾರ ಆಫ್ಘನ್ ಮೇಲೆ ಪಾಕ್ ವಾಯುದಾಳಿ ಆರಂಭಿಸಿತ್ತು. ಯುದ್ಧದ ಆರಂಭದಲ್ಲಿ 100ಕ್ಕೂ ಹೆಚ್ಚು ಉಭಯ ಕಡೆಯವರು ಸತ್ತಿದ್ದರು. ಆಗ ಬುಧವಾರ 48 ತಾಸು ಕದನವಿರಾಮ ಪ್ರಕಟಿಸಲಾಗಿತ್ತು. ಆದರೆ ಅದಾಗಿ 24 ಗಂಟೆಯ ಬಳಿಕ ತಾಲಿಬಾನಿ ಉಗ್ರರು ಪಾಕ್ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ನಡೆಸಿದ್ದ ವಾಯುದಾಳಿಗೆ ಶನಿವಾರ 3 ಆಫ್ಘನ್ ಕ್ರಿಕೆಟಿಗರು ಸೇರಿ 10 ಜನ ಸಾವನ್ನಪ್ಪಿದ್ದರು.