ಸಾರಾಂಶ
ಜೈಷ್ ಹೇಳಿಕೆಯಿಂದ ಪಾಕ್ ಬಣ್ಣ ಬಯಲು
ನವಭಾರತ ಅಣು ಬೆದರಿಕೆಗೆ ಬಗ್ಗೋದಿಲ್ಲಧಾರ್(ಮ.ಪ್ರ.): ‘ಇಂದು ಜೈಷ್ ಉಗ್ರರೇ ಪಾಕಿಸ್ತಾನದ ಅಸಲಿ ಬಣ್ಣವನ್ನು ಬಯಲಿಗೆಳೆದಿದ್ದಾರೆ. ಭಾರತ ನಡೆಸಿದ ದಾಳಿಯಲ್ಲಿ ಪಾಕ್‌ನಲ್ಲಿರುವ ಉಗ್ರ ನೆಲೆಗಳೆಲ್ಲ ನಾಶವಾಗಿ, ಕಣ್ಣು ಮಿಟುಕಿಸುವಷ್ಟರಲ್ಲಿ ಪಾಕ್ ಸೇನೆ ಮಂಡಿ ಊರುವಂತಾಗಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ, ಜೈಷ್-ಎ-ಮೊಹಮ್ಮದ್ ನಾಯಕ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಶತ್ರುರಾಷ್ಟ್ರದ ಕಾಲೆಳೆದಿದ್ದಾರೆ.
ಇಲ್ಲಿ ಪ್ರಧಾನಮಂತ್ರಿ ಮಿತ್ರ ಪಾರ್ಕ್‌ನ ಶಂಕುಸ್ಥಾಪನೆ ನೆರವೇರಿಸಿ ಮೋದಿ ಮಾತನಾಡುತ್ತಿದ್ದರು. ‘ನಿನ್ನೆಯಷ್ಟೇ ಪಾಕ್‌ನ ಉಗ್ರರು ತಮ್ಮ ದುಃಸ್ಥಿತಿಯನ್ನು ಸ್ಮರಿಸಿ ಮರುಗುತ್ತಿದ್ದುದನ್ನು ಇಡೀ ವಿಶ್ವವೇ ನೋಡಿದೆ. ಉಗ್ರರು ನನ್ನ ಸಹೋದರಿಯರು ಮತ್ತು ತಾಯಂದಿರ ಸಿಂದೂರ ಅಳಿಸಿದ್ದಕ್ಕೆ ಪ್ರತೀಕಾರವಾಗಿ ನಮ್ಮ ಯೋಧರು ಆಪರೇಷನ್ ಸಿಂದೂರ ನಡೆಸಿ, ಪಾಕ್ ಸೇನೆ ಕ್ಷಣಮಾತ್ರದಲ್ಲಿ ಮಂಡಿಯೂರುವಂತೆ ಮಾಡಿದರು’ ಎಂದರು.‘ಬಹಾವಲ್ಪುರದಲ್ಲಿ ನಡೆದ ದಾಳಿಯಲ್ಲಿ ಮಸೂದ್ ಅಜರ್‌ನ ಪರಿವಾರ ಛಿದ್ರವಾಗಿತ್ತು’ ಎಂದು ಮಂಗಳವಾರವಷ್ಟೇ ಜೈಷ್ ಸಂಘಟನೆಯ ಉಗ್ರನೊಬ್ಬ ಬಹಿರಂಗವಾಗಿ ಒಪ್ಪಿಕೊಂಡಿದ್ದ. ಇದನ್ನು ನೆನಪಿಸಿದ ಮೋದಿ, ‘ಭಾರತದ ದಾಳಿಯಿಂದ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳು ಧ್ವಂಸವಾಗಿದ್ದವು ಎಂದು ಈಗ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಜತೆಗೆ, ಬಹಾವಲ್ಪುರದಲ್ಲಿ ಜೈಷ್ ಸಂಘಟನೆಯ ಪ್ರಧಾನ ಕಚೇರಿ ಇದೆ ಎಂಬುದು ಸಾಬೀತಾಗಿದೆ’ ಎಂದರು.
ಅಣುದಾಳಿಗೆ ಬೆದರಲ್ಲ:‘ಆಪರೇಷನ್ ಸಿಂದೂರದಿಂದ, ಉಗ್ರ ದಾಳಿಗೆ ಭಾರತ ತಕ್ಕ ಉತ್ತರ ನೀಡುತ್ತದೆ ಎಂಬುದರ ಜತೆಗೆ, ನವಭಾರತ ಅಣುದಾಳಿ ಬೆದರಿಕೆಗೂ ಬಗ್ಗುವುದಿಲ್ಲ ಎಂಬುದು ಸಾಬೀತಾಗಿದೆ. ನಾವು ಉಗ್ರರ ಮನೆಗೇ ನುಗ್ಗಿ ಹೊಡೆಯುತ್ತೇವೆ’ ಎಂದು ಪ್ರಧಾನಿ ಹೇಳಿದರು.