ಕಾಶ್ಮೀರ ವಿಚಾರದಲ್ಲಿ ಮತ್ತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಿರಿಕ್‌ ಮಾಡಿರುವ ಪಾಕಿಸ್ತಾನ

| Published : Nov 10 2024, 01:30 AM IST / Updated: Nov 10 2024, 05:23 AM IST

ಸಾರಾಂಶ

ಕಾಶ್ಮೀರ ವಿಚಾರದಲ್ಲಿ ಮತ್ತೆ ವಿಶ್ವಸಂಸ್ಥೆಯಲ್ಲಿ ಕಿರಿಕ್‌ ಮಾಡಿರುವ ಪಾಕಿಸ್ತಾನ, ಭಾರತ-ಪಾಕಿಸ್ತಾನದ ಗಡಿಯುದ್ದಕ್ಕೂ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಗುಂಪನ್ನು (ಯುಎನ್‌ಎಂಒಜಿಐಪಿ) ನಿಯೋಜಿಸಬೇಕು ಎಂದು ಒತ್ತಾಯಿಸಿದೆ.

ವಿಶ್ವಸಂಸ್ಥೆ: ಕಾಶ್ಮೀರ ವಿಚಾರದಲ್ಲಿ ಮತ್ತೆ ವಿಶ್ವಸಂಸ್ಥೆಯಲ್ಲಿ ಕಿರಿಕ್‌ ಮಾಡಿರುವ ಪಾಕಿಸ್ತಾನ, ಭಾರತ-ಪಾಕಿಸ್ತಾನದ ಗಡಿಯುದ್ದಕ್ಕೂ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಗುಂಪನ್ನು (ಯುಎನ್‌ಎಂಒಜಿಐಪಿ) ನಿಯೋಜಿಸಬೇಕು ಎಂದು ಒತ್ತಾಯಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಡೆದ ರಾಜಕೀಯ ಮತ್ತು ವಸಾಹತುಶಾಹಿಗಳ ಶಾಂತಿಪಾಲನಾ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪ್ರತಿನಿಧಿ ಈ ಆಗ್ರಹ ಮಾಡಿದ್ದಾರೆ.

ಆದರೆ ಭಾರತ ತಿರುಗೇಟು ನೀಡಿದೆ. ‘ಪಾಕ್‌ ಸುಳ್ಳುಗಳಿಂದ ದೂರವಿರಬೇಕು. ಅದಕ್ಕೆ ಸತ್ಯ ಬದಲಿಸುವ ಶಕ್ತಿ ಇಲ್ಲ. ಹಿಂದೆ, ಈಗ, ಮುಂದೆಯೂ ಕಾಶ್ಮೀರ ಭಾರತದ ಭಾಗ’ ಎಂದು ಭಾರತದ ಪರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದ್ದಾರೆ.

‘ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ, ಹಿಂದೆ, ಈಗ, ಮುಂದೆಯೂ ಭಾರತದ ಭಾಗವಾಗಿಯೇ ಇರಲಿದೆ. ಇಲ್ಲಿನ ಜನ ಇತ್ತೀಚೆಗಷ್ಟೇ ತಮ್ಮ ಪ್ರಜಾಸತ್ತಾತ್ಮಕ, ಚುನಾವಣೆಯ ಹಕ್ಕು ಪಡೆದುಕೊಂಡಿದ್ದಾರೆ. ಹೊಸ ಸರ್ಕಾರವನ್ನು ಆರಿಸಿದ್ದಾರೆ. ಆದ್ದರಿಂದ ಪಾಕಿಸ್ತಾನ ಇಂತಹ ವಾಕ್ಚಾತುರ್ಯ, ಸುಳ್ಳುಗಳಿಂದ ದೂರವಿರಬೇಕು. ಇದರಿಂದ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ತ್ರಿವೇದಿ ಹೇಳಿದ್ದಾರೆ.