ಸಾರಾಂಶ
ವಿಶ್ವಸಂಸ್ಥೆ: ಪಾಕಿಸ್ತಾನದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ, ಪಾಕ್ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಎದುರಲ್ಲೇ ಭಾರತ ಪಾಕಿಸ್ತಾನವನ್ನು ‘ಭಯೋತ್ಪಾದಕ’ ಮತ್ತು ಮತಾಂಧತೆಯಲ್ಲಿ ಮುಳುಗಿರುವ ‘ಸರಣಿ ಸಾಲಗಾರ’ ಎಂದು ಕರೆದು ತೀವ್ರ ಮುಖಭಂಗ ಉಂಟುಮಾಡಿದೆ.
ಪಾಕಿಸ್ತಾನದ ಅಧ್ಯಕ್ಷತೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಂಗಳವಾರ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತ ಖಾಯಂ ಪ್ರತಿನಿಧಿ ಪಿ. ಹರೀಶ್, ‘ಒಂದೆಡೆ ಪ್ರಬುದ್ಧ ಪ್ರಜಾಪ್ರಭುತ್ವ, ಪ್ರಗತಿಶೀಲ ಆರ್ಥಿಕತೆ, ಬಹುತ್ವ ಮತ್ತು ಒಳಗೊಳ್ಳುವಿಕೆಯ ಸಮಾಜವಾದ ಭಾರತವಿದೆ. ಇನ್ನೊಂದು ತುದಿಯಲ್ಲಿ, ಮತಾಂಧತೆ ಮತ್ತು ಉಗ್ರವಾದದಲ್ಲಿ ಮುಳುಗಿರುವ, ಐಎಂಎಫ್‌ನಿಂದ ಸಾಲ ಪಡೆಯುವ ಸರಣಿ ಸಾಲಗಾರ ಪಾಕಿಸ್ತಾನವಿದೆ’ ಎಂದು ವ್ಯಂಗ್ಯವಾಡಿದರು.
ಉಗ್ರವಾದದ ಕುರಿತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅವರು, ‘ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ಉತ್ತಮ ನೆರೆಹೊರೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಮನೋಭಾವವನ್ನು ಉಲ್ಲಂಘಿಸುವ ದೇಶಗಳು ಗಂಭೀರ ಬೆಲೆ ತೆರುವಂತೆ ಮಾಡಬೇಕು. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗಾಗಿ, ಉಗ್ರವಾದಕ್ಕೆ ಶೂನ್ಯ ಸಹಿಷ್ಣುತೆ ನೀತಿಯನ್ನು ಜಾಗತಿಕವಾಗಿ ಗೌರವಿಸಬೇಕು’ ಎಂದರು.