ಆಫ್ಘನ್‌ ನೆಲೆ ಮೇಲೆ ಮತ್ತೆ ಪಾಕ್‌ ವಾಯುದಾಳಿ

| Published : Oct 19 2025, 01:00 AM IST

ಸಾರಾಂಶ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಏರ್ಪಟಿದ್ದ 2 ದಿನಗಳ ಕದನ ವಿರಾಮ ವಿಸ್ತರಣೆಯಾಗಿರುವ ನಡುವೆಯೂ ಎರಡೂ ದೇಶಗಳಿಂದ ಪರಸ್ಪರರ ಮೇಲಿನ ದಾಳಿ ಮುಂದುವರೆದಿದೆ.

ಕದನವಿರಾಮ ಉಗ್ರರ ನಾಶಕ್ಕೆ ಅನ್ವಯಿಸದು: ಪಾಕ್

ಪಾಕ್‌ ದಾಳಿಗೆ 3 ಕ್ರಿಕೆಟಿಗರು ಸೇರಿ 10 ಜನರು ಬಲಿ

ಇಸ್ಲಾಮಾಬಾದ್‌: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಏರ್ಪಟಿದ್ದ 2 ದಿನಗಳ ಕದನ ವಿರಾಮ ವಿಸ್ತರಣೆಯಾಗಿರುವ ನಡುವೆಯೂ ಎರಡೂ ದೇಶಗಳಿಂದ ಪರಸ್ಪರರ ಮೇಲಿನ ದಾಳಿ ಮುಂದುವರೆದಿದೆ.

ಪಾಕ್‌ನ ಖೈಬರ್‌ ಪಂಖ್ತೂಂಖ್ವಾ ಪ್ರಾಂತ್ಯದ ವಜೀರಿಸ್ತಾನದ ಮೇಲೆ ತೆಹ್ರಿಕ್‌-ಎ-ತಾಲಿಬಾನ್‌ ಶುಕ್ರವಾರ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಶನಿವಾರ ಅಫ್ಘನ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ಅಂಗೂರ್‌ ಅಡ್ಡಾ ಸೇರಿದಂತೆ ಪಕ್ತಿಕಾ ಪ್ರಾಂತ್ಯದ ಉರ್ಗುನ್‌, ಬರ್ಮಾಲಾ ಜಿಲ್ಲೆಗಳಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಪಾಕ್‌ ಸೇನೆ ದಾಳಿ ನಡೆಸಿ ಹಲವು ಉಗ್ರರನ್ನು ಹತ್ಯೆಗೈದಿರುವುದಾಗಿ ಪಾಕ್‌ ಸೆನೆ ಹೇಳಿಕೊಂಡಿದೆ.

ಜೊತೆಗೆ ತನ್ನ ದಾಳಿಗೆ ಸಮರ್ಥನೆಯನ್ನೂ ನೀಡಿರುವ ಪಾಕ್‌, ‘2 ದಿನಗಳ ಕನದವಿರಾಮವು ಉಗ್ರ ಸಂಘಟನೆಗಳು ಮತ್ತು ಅವುಗಳ ಅಡಗುತಾಣಗಳ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದ್ದಲ್ಲ’ ಎಂದು ಹೇಳಿದೆ.

3 ಕ್ರಿಕೆಟಿಗರು ಬಲಿ:

ಪಕ್ತಿಕಾ ಪ್ರಾಂತ್ಯದ ಮೇಲೆ ಪಾಕ್ ನಡೆಸಿದ ವಾಯುದಾಳಿಯಲ್ಲಿ ಮೂವರು ಕ್ರಿಕೆಟಿಗರು ಸಾವನ್ನಪ್ಪಿದ್ದಾರೆ. ಉರ್ಗುನ್‌ ಜಿಲ್ಲೆಯಲ್ಲಿ ಪಂದ್ಯವೊಂದನ್ನು ಆಡಿ ಆಟಗಾರರು ಮರಳುವ ವೇಳೆ ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಮೂವರು ಕ್ರಿಕೆಟಿಗರು ಸೇರಿ 10 ಜನರು ಸಾವನ್ನಪ್ಪಿದ್ದಾರೆ. ಕ್ರಿಕೆಟಿಗರು ಸ್ಥಳೀಯ ಆಟಗಾರರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚರಿಕೆ:

ಈ ನಡುವೆ ಆಫ್ಘಾನಿಸ್ತಾನದ ಟಿಟಿಪಿ ಉಗ್ರರಿಗೆ ತನ್ನ ದೇಶದ ಮೇಲೆಇನ ಭಯೋತ್ಪಾದಕ ದಾಳಿಗಳನ್ನು ನಿಲ್ಲಿಸುವಂತೆ ಪಾಕಿಸ್ತಾನ ಎಚ್ಚರಿಸಿದೆ. ‘ಆಫ್ಘಾನಿಸ್ತಾನ ಶಾಂತಿ ಮತ್ತು ಅಶಾಂತಿಯ ನಡುವೆ ಒಂದನ್ನು ಆರಿಸಿಕೊಳ್ಳಬೇಕು. ಆಫ್ಘನ್‌ ನೆಲದಿಂದ ಪಾಕ್‌ ವಿರುದ್ಧ ಕಾರ್ಯಾಚರಿಸುತ್ತಿರುವ ಉಗ್ರಸಂಘಟನೆಗಳನ್ನು ತಾಲಿಬಾನ್‌ ಸರ್ಕಾರ ನಿಗ್ರಹಿಸಬೇಕು. ಇಲ್ಲದಿದ್ದರೆ ಅವುಗಳನ್ನೆಲ್ಲಾ ಧೂಳೀಪಟ ಮಾಡುತ್ತೇವೆ’ ಎಂದು ಪಾಕ್‌ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಹೇಳಿದ್ದಾರೆ.

ಸಂಧಾನ ಮಾತುಕತೆ:

ಉಭಯ ದೇಶಗಳ ಸಂಘರ್ಷ ತಣಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಉನ್ನತ ಮಟ್ಟದ ನಿಯೋಗ ಶನಿವಾರ ಕತಾರ್‌ ರಾಜಧಾನಿ ದೋಹಾದಲ್ಲಿ ಸಭೆ ನಡೆಸಿವೆ. ನಿಯೋಗದಲ್ಲಿ ರಕ್ಷಣಾ ಸಚಿವರು ಮತ್ತು ರಾಷ್ಟ್ರೀಯ ಗುಪ್ತಚರ ಸಂಖ್ಯೆಯ ಮುಖ್ಯಸ್ಥರಿದ್ದಾರೆ.

==

ಪಾಕ್‌ - ಆಫ್ಘನ್‌ ಯುದ್ಧ ನಿಲ್ಸೋದು ನನಗೆ ಸುಲಭ ಕೆಲಸ: ಟ್ರಂಪ್‌

- 8 ಯುದ್ಧದಲ್ಲಿ ಲಕ್ಷಾಂತರ ಜೀವ ಉಳಿಸಿದ್ದೇನೆ

ವಾಷಿಂಗ್ಟನ್‌: ಯುದ್ಧಗಳ ಸಂಧಾನಕಾರ ಎಂದು ತನ್ನನ್ನು ತಾನೇ ಕರೆದುಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸದ್ಯ ನಡೆಯುತ್ತಿರುವ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಯುದ್ಧದ ಬಗ್ಗೆಯೂ ಮಾತನಾಡಿದ್ದು, ‘ಎರಡು ದೇಶಗಳ ನಡುವಿನ ಯುದ್ಧವನ್ನು ಇತ್ಯರ್ಥಗೊಳಿಸುವುದು ನನಗೆ ಸುಲಭದ ಸಂಗತಿ’ ಎಂದಿದ್ದಾರೆ.

ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿರುವ ಟ್ರಂಪ್‌ ‘ಅಫ್ಘಾನಿಸ್ತಾನದಲ್ಲಿ ದಾಳಿ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಈ ಯುದ್ಧವನ್ನು ನಿಲ್ಲಿಸಬೇಕು ಅಂತಿದ್ದರೆ ಅದು ನನಗೆ ಬಹು ಸುಲಭ. ಸಾವಿನಿಂದ ಜನರನ್ನು ಕಾಪಾಡುವುದು ಎಂದರೆ ನನಗೆ ಇಷ್ಟ. ನಾನು ಈಗಾಗಲೇ ಲಕ್ಷಾಂತರ ಮಂದಿಯ ಜೀವ ಉಳಿಸಿದ್ದೇನೆ’ ಎಂದು ಹೇಳಿದರು.

==

ಎಲ್ಲಾ ಆಫ್ಘನ್ನರು ನಮ್ಮ ನೆಲ ತೊರೆಯಿರಿ: ಪಾಕ್‌ ಎಚ್ಚರಿಕೆ

-48 ಗಂಟೆ ಕದನ ವಿರಾಮ ಅಂತ್ಯದ ಬೆನ್ನಲ್ಲೇ ಆದೇಶ

ಇಸ್ಲಾಮಾಬಾದ್‌: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಜಾರಿಯಾಗಿದ್ದ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡ ಬೆನ್ನಲ್ಲೇ, ಪಾಕ್‌ ನೆಲದಲ್ಲಿರುವ ಎಲ್ಲ ಅಫ್ಘಾನಿಸ್ತಾನೀಯರು ತಮ್ಮ ದೇಶಕ್ಕೆ ಹಿಂದಿರುಗಬೇಕು ಎಂದು ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಆದೇಶಿಸಿದ್ದಾರೆ.ಉಭಯ ದೇಶಗಳ ನಡುವೆ ಜಾರಿಯಾಗಿದ್ದ ತಾತ್ಕಾಲಿಕ ಕದನ ವಿರಾಮದ ಅವಧಿ ಶುಕ್ರವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿತ್ತು. ಇದರ ಬೆನ್ನಲ್ಲೇ ಮತ್ತೆ ಸಂಘರ್ಷದ ಮಾತಾಡಿರುವ ಆಸಿಫ್‌, ‘ಪಾಕಿಸ್ತಾನವು ಹಿಂದಿನಂತೆ ಇನ್ನು ಮುಂದೆ ಕಾಬೂಲ್‌ ಜೊತೆ ಸಂಬಂಧ ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ನೆಲ ಮತ್ತು ಸಂಪನ್ಮೂಲಗಳು 25 ಕೋಟಿ ಪಾಕಿಸ್ತಾನೀಯರಿಗೆ ಸೇರಿವೆ. ಪಾಕ್‌ ನೆಲದಲ್ಲಿ ವಾಸಿಸುವ ಎಲ್ಲಾ ಆಫ್ಘನ್ನರು ತಮ್ಮ ತಾಯ್ನಾಡಿಗೆ ಮರಳಬೇಕು’ ಎಂದು ಗುಡುಗಿದ್ದಾರೆ.