ಸಾರಾಂಶ
‘ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದೊಳಗೆ ರಹಸ್ಯ ಅಥವಾ ಗುಪ್ತ ಕೋಣೆಗಳೇನಾದರೂ ಇವೆಯೇ’ ಎಂಬ ಗುಮಾನಿಯನ್ನು ಪರಿಹರಿಸಲು ಭಂಡಾರವನ್ನು ಸುಧಾರಿತ ತಂತ್ರಜ್ಞಾನದಿಂದ ತಪಾಸಣೆ ಮಾಡಬೇಕು ಎಂದು ಭಂಡಾರದ ಮೇಲ್ವಿಚಾರಣಾ ಸಮಿತಿಯು ದೇಗುಲದ ವ್ಯವಸ್ಥಾಪನಾ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ.
ಪಿಟಿಐ ಭುವನೇಶ್ವರ: ‘ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದೊಳಗೆ ರಹಸ್ಯ ಅಥವಾ ಗುಪ್ತ ಕೋಣೆಗಳೇನಾದರೂ ಇವೆಯೇ’ ಎಂಬ ಗುಮಾನಿಯನ್ನು ಪರಿಹರಿಸಲು ಭಂಡಾರವನ್ನು ಸುಧಾರಿತ ತಂತ್ರಜ್ಞಾನದಿಂದ ತಪಾಸಣೆ ಮಾಡಬೇಕು ಎಂದು ಭಂಡಾರದ ಮೇಲ್ವಿಚಾರಣಾ ಸಮಿತಿಯು ದೇಗುಲದ ವ್ಯವಸ್ಥಾಪನಾ ಸಮಿತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ.
ಸೋಮವಾರ ಪುರಿಯಲ್ಲಿ ನಡೆದ ಸಭೆ ನಂತರ ಈ ಘೋಷಣೆ ಮಾಡಿದ ಮೇಲ್ವಿಚಾರಣಾ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಬಿಸ್ವನಾಥ್ ರಾಥ್, ‘ರತ್ನ ಭಂಡಾರದ ಸಮಗ್ರ ಪರಿಶೀಲನೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಬೇಕೆಂದು ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭಂಡಾರಕ್ಕೆ ಹಾನಿ ಮಾಡದಂತಹ ಸಾಧನಗಳನ್ನು ಬಳಸಬೇಕು ಎಂಬುದು ನಮ್ಮ ಇರಾದೆ’ ಎಂದರು.‘ಒಮ್ಮೆ ಇಂಥ ಸಮಗ್ರ ತಪಾಸಣೆ ನಡೆದರೆ ರಹಸ್ಯ ಕೋಣೆ ಇದೆಯೋ ಇಲ್ಲವೋ ತಿಳಿದುಬರಲಿದೆ. ಅಂತಹ ಯಾವುದೇ ಕೋಣೆಗಳು ಪತ್ತೆಯಾದರೆ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇಲ್ಲದಿದ್ದರೆ, ಖಜಾನೆ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಾಗುವುದು " ಎಂದು ನ್ಯಾ। ರಾಥ್ ವಿವರಿಸಿದರು.ಇದೇ ವೇಳೆ, ಭಂಡಾರದಲ್ಲಿನ ಖಾಲಿ ಬೀರುಗಳು ಮತ್ತು ಅಲ್ಮೇರಾಗಳನ್ನು ಸ್ಥಳಾಂತರಿಸಿ ಅವನ್ನು ಸಂರಕ್ಷಿಸಲು ಸಮಿತಿ ನಿರ್ಧರಿಸಿದೆ.
ರತ್ನಭಂಡಾರವನ್ನು 48 ವರ್ಷ ಬಳಿಕ ಇತ್ತೀಚೆಗೆ ತೆರೆಯಲಾಗಿತ್ತು. ಅವುಗಳಲ್ಲಿ ನೂರಾರು ಕೋಟಿ ರು. ಮೌಲ್ಯದ ಪುರಾತನ ಚಿನ್ನದ ಸಂಗ್ರಹವಿದೆ ಎನ್ನಲಾಗಿದೆ. ಆಭರಣಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಮೌಲ್ಯಮಾಪನ ಇನ್ನೂ ಆರಂಭ ಆಗಿಲ್ಲ.