ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂದ್ರ ಸರ್ಕಾರದ ಮೊದಲ ಬಜೆಟ್‌ಗೆ ಮುಹೂರ್ತ ನಿಗದಿ ಆಗಿದ್ದು, ಜು.23ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಮುಂಗಡಪತ್ರ ಮಂಡಿಸಲಿದ್ದಾರೆ.
ಈ ಕುರಿತು ಶನಿವಾರ ಟ್ವೀಟರ್‌ನಲ್ಲಿ (ಎಕ್ಸ್) ಮಾಹಿತಿ ನೀಡಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು, ‘18ನೇ ಲೋಕಸಭೆಯ ಬಜೆಟ್ ಅಧಿವೇಶನ ಜು.22ಕ್ಕೆ ಆರಂಭವಾಗಿ ಆ.12ರವರೆಗೂ ನಡೆಯಲಿದೆ. ಇದರ ನಡುವೆ ಜು.23ಕ್ಕೆ ಬಜೆಟ್ ಮಂಡನೆ ನಡೆಯಲಿದೆ. ಸರ್ಕಾರದ ಶಿಫಾರಸಿನಂತೆ ಅನ್ವಯ ರಾಷ್ಟ್ರಪತಿಗಳು 2024ರ ಜು.22ರಿಂದ ಆ.12ರವರೆಗೆ ಬಜೆಟ್ ಅಧಿವೇಶನ ಕರೆಯಲು ಅನುಮೋದಿಸಿದ್ದಾರೆ’ ಎಂದು ತಿಳಿಸಿದ್ದಾರೆ.ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇದು ಮೊದಲ ಬಜೆಟ್ ಅಧಿವೇಶನವಾಗಲಿದೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ಇದ್ದ ಹಿನ್ನೆಲೆಯಲ್ಲಿ ಹಿಂದಿನ ಮೋದಿ ಸರ್ಕಾರ ಕಳೆದ ಫೆಬ್ರುವರಿ ತಿಂಗಳಲ್ಲಿ ಮಧ್ಯಂತರ ಬಜೆಟ್ ಮಂಡನೆ ಮಾಡಿತ್ತು.
ನಿರೀಕ್ಷೆಗಳೇನು?:ಇದೀಗ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸರ್ಕಾರ ಸಿದ್ಧವಾಗಿದ್ದು, ಆರ್ಥಿಕತೆ, ತೆರಿಗೆ, ಕೃಷಿ, ಉದ್ಯೋಗ ಸೃಷ್ಟಿ ಮೊದಲಾದ ವಿಷಯಗಳಲ್ಲಿ ಹಲವು ಐತಿಹಾಸಿಕ ನಿರ್ಧಾರಗಳನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆಗಳಿವೆ.
ನಿರ್ಮಲಾಗೆ ದಾಖಲೆಯ 7ನೇ ಬಜೆಟ್:ನಿರ್ಮಲಾ ಸೀತಾರಾಮನ್ ಈ ಬಜೆಟ್ ಮಂಡನೆಯೊಂದಿಗೆ ಸತತ 7 ಬಜೆಟ್ ಮಂಡಿಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸತತ 6 ಬಜೆಟ್ ಮಂಡಿಸಿದ ಮೊರಾರ್ಜಿ ದೇಸಾಯಿ ದಾಖಲೆ ಮುರಿಯಲಿದ್ದಾರೆ. ನಿರ್ಮಲಾ ಈಗಾಗಲೇ ಸತತ 5 ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಚಿದಂಬರಂ ಮತ್ತು ಯಶವಂತ ಸಿನ್ಹಾ ದಾಖಲೆ ಮುರಿದ್ದಾರೆ. ಆದರೆ ಒಟ್ಟಾರೆ (ಸತತ ಅಲ್ಲ) 10 ಬಜೆಟ್ ಮಂಡಿಸಿದ ದಾಖಲೆ ಈಗಲೂ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಹೆಸರಲ್ಲೇ ಇದೆ.