ವಯನಾಡು ಭೂ ಕುಸಿತ ದುರಂತ: ಯದ್ವಾತದ್ವಾ ಕಿರುಚಾಡಿ ಹಲವು ಕುಟುಂಬಗಳನ್ನು ಉಳಿಸಿದ ಗಿಳಿ!

| Published : Aug 06 2024, 01:34 AM IST / Updated: Aug 06 2024, 06:04 AM IST

ಸಾರಾಂಶ

ಸಾಕು ಗಿಳಿಯೊಂದು ತಾನು ಗಾಯ ಮಾಡಿಕೊಂಡು ತನ್ನ ಮಾಲೀಕರಿಗೆ ನೀಡಿದ ಎಚ್ಚರಿಕೆಯ ಪರಿಣಾಮ ವಯನಾಡು ಜಿಲ್ಲೆಯ ಚೂರಲ್‌ಮಲೆ ನಾಲ್ಕು ಕುಟುಂಬಗಳು ಪ್ರಾಣ ಉಳಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ.

ಮುಂಡಕ್ಕೈ: ಸಾಕು ಗಿಳಿಯೊಂದು ತಾನು ಗಾಯ ಮಾಡಿಕೊಂಡು ತನ್ನ ಮಾಲೀಕರಿಗೆ ನೀಡಿದ ಎಚ್ಚರಿಕೆಯ ಪರಿಣಾಮ ವಯನಾಡು ಜಿಲ್ಲೆಯ ಚೂರಲ್‌ಮಲೆ ನಾಲ್ಕು ಕುಟುಂಬಗಳು ಪ್ರಾಣ ಉಳಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ. 

ವಿನೋದ್‌ ಎಂಬುವವರು ತಮ್ಮ ಸಾಕು ಗಿಣಿ ಕಿಂಗಿಣಿಯ ಈ ಸಾಹಸವನ್ನು ಸೋಮವಾರ ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ವಿನೋದ್‌, ‘ನಾನು ನನ್ನ ಮನೆಯಲ್ಲಿ ಕಿಂಗಿಣಿ ಎಂಬ ಗಿಣಿ ಸಾಕಿದ್ದೇನೆ. ಭೂಕುಸಿತಕ್ಕೂ ಹಿಂದಿನ ದಿನ ನಾನು ಕುಟುಂಬ ಸಮೇತ ಸಮೀಪದಲ್ಲೇ ಇದ್ದ ಸೋದರಿಯ ಮನೆಗೆ ಹೋಗಿದ್ದೆ. ಜೊತೆಗೆ ಗಿಳಿಯನ್ನೂ ಕೊಂಡೊಯ್ದಿದ್ದೆ. 

ಮಾರನೇ ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಗಿಳಿ ಜೋರಾಗಿ ಕೂಗಲು ಆರಂಭಿಸಿತು. ಮೊದಲಿಗೆ ನಾನು ಅದನ್ನು ಸುಮ್ಮನಿರಿಸಲು ಪ್ರಯತ್ನಿಸಿದೆ’.‘ಆದರೆ ಏನೂ ಮಾಡಿದರೂ ಅದು ಸುಮ್ಮನಾಗಲಿಲ್ಲ. ಬದಲಾಗಿ ಕೂಗಾಟ ಹೆಚ್ಚಿಸಿತು. ಜೊತೆಗೆ ರೆಕ್ಕೆಯನ್ನು ಜೋರಾಗಿ ಪಂಚರಕ್ಕೆ ಬಡಿಯತೊಡಗಿತು. ಆ ರಭಸಕ್ಕೆ ರೆಕ್ಕೆಗಳೇ ಕಿತ್ತುಬಂದವು. ಆಗ ನಾನು ಇದು ಇದು ಏನೋ ಅನಾಹುತದ ಮುನ್ಸೂಚನೆ ಎಂದು ಅರಿತೆ. 

ಕೂಡಲೇ, ಏನೋ ದೊಡ್ಡ ಅನಾಹುತ ಆಗುವಂತಿದೆ ಎಂದು ನನ್ನ ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಕರೆ ಮಾಡಿ ಎಚ್ಚರಿಸಿದೆ’.‘ಅದಾದ ಸ್ವಲ್ಪ ಸಮಯದಲ್ಲೇ ನಾನು ಕರೆ ಮಾಡಿದ್ದ ಜಿಜಿನ್‌, ಪ್ರಶಾಂತ್‌, ಅಶ್ಕರ್‌ ತಮ್ಮ ಮನೆಯಿಂದ ಹೊರಬಂದು ನೋಡಿದರೆ ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು ಹರಿದು ಬರುವುದು ಕಂಡಿತ್ತು. 

ಕೂಡಲೇ ಅವರು ಕುಟುಂಬ ಸಮೇತರಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿದೆ. ನಾವು ಕೂಡಾ ಕುಟುಂಬ ಸದಸ್ಯರೊಂದಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಿದೆವು. ಕೆಲ ಗಂಟೆಗಳ ಬಳಿಕ ಪ್ರವಾಹದ ಅಬ್ಬರಕ್ಕೆ ನನ್ನ ಮತ್ತು ಜಿಜಿನ್‌ ಮನೆ ಸಂಪೂರ್ಣ ಕೊಚ್ಚಿ ಹೋದರೆ, ಪ್ರಶಾಂತ್‌ ಮತ್ತು ಅಶ್ಕರ್‌ ಮನೆಗೆ ಭಾಗಶಃ ಹಾನಿಯಾಯಿತು. ಒಟ್ಟಾರೆ ನಮ್ಮ ಕಿಂಕಿಣಿ ನಾಲ್ಕು ಕುಟುಂಬದ ಜೀವ ಉಳಿಸಿತು ಎಂದು ವಿನೋದ್‌ ಹೇಳಿದ್ದಾರೆ.

ಬೆಟ್ಟದಿಂದ ಇಳಿದು ಓಡಿಹೋದ ಆನೆ ಸಿಸಿಟೀವಿಯಲ್ಲಿ ಸೆರೆ! 

ವಯನಾಡು: ಪ್ರಾಕೃತಿಕ ವಿಕೋಪದ ಮಾಹಿತಿ ಮಾನವರು ಹಾಗೂ ಮಾನವರ ತಂತ್ರಜ್ಞಾನಕ್ಕಿಂತ ಮೊದಲೇ ಪ್ರಾಣಿಗಳಿಗೆ ತಿಳಿಯುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ವಯನಾಡಲ್ಲಿ ಸಿಕ್ಕಿದೆ. ಭೂಕುಸಿತಕ್ಕೆ ತುತ್ತಾದ ಅರಣ್ಯಪ್ರದೇಶವೊಂದರಲ್ಲಿ, ಭೂಕುಸಿತಕ್ಕೂ ಒಂದು ಗಂಟೆ ಮೊದಲು ಆನೆಗಳ ಗುಂಪೊಂದು ಆತುರಾತುರವಾಗಿ ಬೆಟ್ಟ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಓಡುತ್ತಿರುವ ಸಿಸಿಟೀವಿ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಆನೆಗಳ ಗುಂಪು, ದಟ್ಟ ಅರಣ್ಯದಿಂದ ಇಳಿದು ರಸ್ತೆಯೊಂದನ್ನು ದಾಟಿ ಸುರಕ್ಷಿತ ತಗ್ಗುಪ್ರದೇಶಕ್ಕೆ ತೆರಳುತ್ತಿರುವುದನ್ನು ಕಾಣಬಹುದಾಗಿದೆ.