ಸಾರಾಂಶ
ಕಲ್ಲಿಕೋಟೆ (ಕೇರಳ): ‘ನಾನು ಪ್ರಧಾನಿ ನರೇಂದ್ರ ಮೋದಿ ಟೀಕಾಕಾರ ಎನ್ನುವ ಏಕೈಕ ಕಾರಣಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಕಣಕ್ಕೆ ಇಳಿಯುವಂತೆ ಮೂರು ಪಕ್ಷಗಳು ನನ್ನ ಹಿಂದೆ ಬಿದ್ದಿವೆ. ಆದರೆ ನಾನು ಯಾವುದೇ ರಾಜಕೀಯ ಪಕ್ಷಗಳ ಬಲೆಗೂ ಬೀಳಲ್ಲ’ ಎಂದು ಖ್ಯಾತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಇಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ‘ಇದೀಗ ಚುನಾವಣೆಗಳು ಸನ್ನಿಹಿತವಾಗಿದೆ. ಮೂರು ಪಕ್ಷಗಳು ನನ್ನ ಹಿಂದೆ ಬಿದ್ದಿವೆ. ಹೀಗಾಗಿ ನಾನು ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವೆ.
ಏಕೆಂದರೆ ನಾನು ಅವುಗಳ ಬಲೆಗೆ ಬೀಳಲು ಸಿದ್ಧನಿಲ್ಲ. ಅವರು ಜನರಿಗಾಗಿ, ನನ್ನ ಸಿದ್ಧಾಂತಕ್ಕಾಗಿ ನನ್ನ ಸ್ಪರ್ಧೆ ಬಯಸುತ್ತಿಲ್ಲ. ಬದಲಾಗಿ ನೀವು ಮೋದಿಯ ಪ್ರಬಲ ಟೀಕಾಕಾರ, ಹೀಗಾಗಿ ನೀವು ಉತ್ತಮ ಅಭ್ಯರ್ಥಿ ಎನ್ನುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಜಕೀಯ ಪಕ್ಷಗಳು ತಮ್ಮ ಧ್ವನಿಯನ್ನೇ ಕಳೆದುಕೊಂಡಿವೆ ಮತ್ತು ಅವುಗಳಲ್ಲಿ ಸತ್ಯಾಂಶವೇ ಉಳಿದಿಲ್ಲ. ಈ ಕಾರಣಕ್ಕಾಗಿಯೇ ಹಲವು ಪಕ್ಷಗಳು ಅಭ್ಯರ್ಥಿಗಳ ಕೊರತೆ ಎದುರಿಸುತ್ತಿವೆ. ನಾವು ಅಷ್ಟು ಬಡವರಾಗಿದ್ದೇವೆ‘ ಎಂದು ಪ್ರಕಾಶ್ ರಾಜ್ ವಿಷಾದಿಸಿದರು.
ಇದೇ ವೇಳೆ ‘ನೀವು ಮೋದಿಯನ್ನು ದ್ವೇಷಿಸುತ್ತೀರಾ?’ ಎಂಬ ಪ್ರಶ್ನೆಗೆ, ‘ನಾನು ಅವರನ್ನು ದ್ವೇಷಿಸುವುದಿಲ್ಲ. ಅವರೇನು ನನಗೆ ಹೆಣ್ಣು ಕೊಟ್ಟ ಮಾವನೇ? ಅಥವಾ ಅವರೊಂದಿಗೆ ನನಗೇನಾದರೂ ಆಸ್ತಿ ವಿಷಯದಲ್ಲಿ ಜಗಳವಿದೆಯೇ? ನಾನು ಅವರಿಗೆ ಹೇಳುವುದಿಷ್ಟೇ. ನಾನೊಬ್ಬ ತೆರಿಗೆ ಪಾವತಿದಾರ.
ನಾನು ನಿಮಗೆ ವೇತನ ನೀಡುತ್ತಿದ್ದೇನೆ. ಆದರೆ ನೀವು ನನ್ನನ್ನು ಸೇವಕನ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದೀರಿ. ಇದೆಲ್ಲಾ ನಡೆಯೋಲ್ಲ. ನಿಮ್ಮ ಕೆಲಸ ನೀವು ಮಾಡಿ ಎಂದಷ್ಟೇ ನಾನು ಅವರಿಗೆ ಹೇಳಬಯಸುತ್ತೇನೆ’ ಎಂದು ನಟ ಹೇಳಿದರು.
ಜೊತೆಗೆ ಟ್ವೀಟರ್‌ನಲ್ಲೂ ತಮ್ಮ ಸರ್ಕಾರಿ ವಿರೋಧಿ ನಿಲುವಿನ ಪೋಸ್ಟ್ ಸಮರ್ಥಿಸಿಕೊಂಡ ಪ್ರಕಾಶ್ ರಾಜ್, ‘ಎಲ್ಲರ ಹೃದಯದಲ್ಲಿ ಇರುವ ಮಾತುಗಳನ್ನೇ ನಾನು ಆಡಿದ್ದೇನೆ. ಹೀಗಾಗಿ ಇದು ನನ್ನ ಧ್ವನಿಯಲ್ಲ, ನಮ್ಮ ಧ್ವನಿ.
ಇದು ನನ್ನ ಮನ್ ಕೀ ಬಾತ್ ಅಲ್ಲ, ನಮ್ಮ ಮನ್ ಕೀ ಬಾತ್. ಅಧಿಕಾರದಲ್ಲಿರುವ ವ್ಯಕ್ತಿಗಳಿಗೆ ಪ್ರಶ್ನೆಗಳನ್ನು ಕೇಳಬೇಕು. ಅವರಿಗೆ ನಾನು ಮತ ಹಾಕಿದ್ದೀನೋ? ಇಲ್ಲವೋ? ಅವರು ನನ್ನ ಪ್ರಧಾನಿ. ಇದು ಪ್ರಜಾಪ್ರಭುತ್ವ.
ಹೀಗಾಗಿ ನೀನು ನಮಗೆ ಮತ ಹಾಕಿಲ್ಲ, ಹೀಗಾಗಿ ನೀನು ನನ್ನನ್ನು ಪ್ರಶ್ನಿಸುವಂತಿಲ್ಲ ಎಂದು ಯಾರೂ ಕೇಳುವಂತಿಲ್ಲ. ಮೋದಿ ಕೆಳಗಿಳಿದ ತಕ್ಷಣ ಯಾರೇ ಆ ಹುದ್ದೆಗೆ ಏರಿದರೂ ನಾನು ಅವರನ್ನೂ ಇದೇ ರೀತಿ ಪ್ರಶ್ನಿಸುವೆ.’ ಎಂದು ಹೇಳಿದರು.