ವಿಮಾನ 13 ತಾಸು ತಡ ಆಗಿದ್ದಕ್ಕೆ ಪೈಲಟ್‌ಗೆ ಹಲ್ಲೆ!

| Published : Jan 16 2024, 01:51 AM IST / Updated: Jan 16 2024, 11:09 AM IST

ಸಾರಾಂಶ

ದೆಹಲಿಯಲ್ಲಿ ಭಾರಿ ಮಂಜು ಹಾಗೂ ವಾಯು ಮಾಲಿನ್ಯದಿಂದಾಗಿ ವಿಮಾನ ಮತ್ತಷ್ಟು ಹೊತ್ತು ತಡವಾಗಿದೆ ಎಂದು ಹೇಳಿದ ವಿಮಾನ ಸಿಬ್ಬಂದಿಯ ಮೇಲೆ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

ನವದೆಹಲಿ: ಪ್ರತಿಕೂಲ ಹವಾಮಾನದ ಕಾರಣ ವಿಮಾನ ಸಂಚಾರ ಇನ್ನಷ್ಟು ವಿಳಂಬವಾಗಲಿದೆ ಎಂಬ ಘೋಷಣೆಯಿಂದ ಆಕ್ರೋಶಗೊಂಡ ಪ್ರಯಾಣಿಕನೊಬ್ಬ ವಿಮಾನದೊಳಗೇ ಸಹಪೈಲಟ್‌ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಭಾನುವಾರ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಇಂಡಿಗೋ ವಿಮಾನದೊಳಗೆ ನಡೆದ ಈ ಘಟನೆ ಬಳಿಕ ದಾಳಿಕೋರ ಪ್ರಯಾಣಿಕನನ್ನು ಕೆಳಗಿಳಿಸಿ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಬಳಿಕ ಪೈಲಟ್‌ ನೀಡಿದ ದೂರಿನ ಅನ್ವಯ ಸಾಹಿಲ್‌ ಎಂಬ ಪ್ರಯಾಣಿಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ ಘಟನೆಯನ್ನು ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಖಂಡಿಸಿದ್ದಾರೆ. ಜೊತೆಗೆ ಇಂಥ ಘಟನೆ ಯಾವುದೇ ಕಾರಣಕ್ಕೂ ಒಪ್ಪಲಾಗದು, ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

ಮತ್ತೊಂದೆಡೆ ದಾಳಿಕೋರ ಸಾಹಿಲ್‌ನನ್ನು ವಿಮಾನ ಪ್ರಯಾಣ ನಿಷೇಧಕ್ಕೆ ಒಳಪಡಿಸುವ ಪ್ರಕ್ರಿಯೆಗೂ ಇಂಡಿಗೋ ಚಾಲನೆ ನೀಡಿದೆ.

ಏನಾಯ್ತು?:
ದೆಹಲಿಯಿಂದ ಗೋವಾಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನದ ಸಂಚಾರ ದಟ್ಟ ಮಂಜಿನ ಕಾರಣ ವಿಳಂಬವಾಗಿತ್ತು. ಆದರೆ ಪ್ರಯಾಣಿಕರನ್ನು ಹೊರಗೆ ಬಿಟ್ಟಿರಲಿಲ್ಲ. ಈ ನಡುವೆ ಮೊದಲ ಸಂಚಾರದ ಪೈಲಟ್‌ನ ಅವಧಿ ಮುಕ್ತಾಯದ ಬಳಿಕ ಮುಂದಿನ ಸರದಿಯ ಪೈಲಟ್‌ ಮತ್ತು ಸಹಪೈಲಟ್‌ ವಿಮಾನಕ್ಕೆ ಆಗಮಿಸಿದ್ದರು.

ಹೀಗೆ ಆಗಮಿಸಿದ ಬಳಿಕ ಸಹ ಪೈಲಟ್‌ ಅನೂಪ್‌ಕುಮಾರ್‌ ವಿಮಾನ ಸಂಚಾರ ಮತ್ತಷ್ಟು ವಿಳಂಬವಾಗುತ್ತದೆ ಎಂದು ಘೋಷಿಸುತ್ತಿದ್ದರು. ಇದರಿಂದಾಗಿ ಈಗಾಗಲೇ 13 ಗಂಟೆಗಳ ಕಾಲ ಸಂಚಾರ ವಿಳಂಬದಿಂದ ಬೇಸತ್ತಿದ್ದ ಸಾಹಿಲ್‌ ಎಂಬ ಪ್ರಯಾಣಿಕ ಏಕಾಏಕಿ ಮುಂದೆ ಓಡಿಬಂದು ಅನೂಪ್‌ ಮೇಲೆ ಹಲ್ಲೆ ನಡೆಸಿದ್ದಾರೆ. 

ಈ ವೇಳೆ ಅಲ್ಲೇ ಇದ್ದ ಇಬ್ಬರು ಗಗನಸಖಿಯರು ನೀವು ಹೀಗೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರೂ ಸುಮ್ಮನಾಗದ ಸಾಹಿಲ್‌, ಏಕೆ ಸಾಧ್ಯವಿಲ್ಲ. ವಿಮಾನ ಓಡಿಸಲು ಸಾಧ್ಯವಿದ್ದರೆ ಓಡಿಸಿ, ಇಲ್ಲವೇ ನಮ್ಮನ್ನು ಹೊರಗೆ ಬಿಡಿ ಎಂದು ಕೂಗಾಡಿದ್ದಾನೆ. 

ಈ ವೇಳೆ ಹಿಂದಿನಿಂದ ಸಹ ಪ್ರಯಾಣಿಕರೊಬ್ಬರು ಸಾಹಿಲ್‌ನನ್ನು ಹಿಡಿದು ಎಳೆದ ಕಾರಣ ಜಗಳ ನಿಂತಿದೆ.ಇದಾದ ಬಳಿಕ ವಿಮಾನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಾಹಿಲ್‌ನನ್ನು ವಿಮಾನದಿಂದ ಕೆಳಗೆ ಇಳಿಸಿದ್ದಾರೆ. ಕೆಳಗೆ ಇಳಿಯುವ ವೇಳೆ ಸಹಪೈಲಟ್‌ ಬಳಿ ಸಾಹಿಲ್‌ ಕ್ಷಮೆ ಯಾಚಿಸಿದ್ದಾನೆ.

ವಿಳಂಬಕ್ಕೆ ಪ್ರಯಾಣಿಕರೇ ಕಾರಣವೆಂದ ಅನೂಪ್‌!
ಈ ನಡುವೆ ವಿಮಾನ ಸಂಚಾರ ವಿಳಂಬ ಪ್ರಯಾಣಕ್ಕೆ ಪ್ರಯಾಣಿಕರೇ ಕಾರಣ ಎಂದು ಸಹಪೈಲಟ್‌ ದೂರಿದ್ದೇ ಸಾಹಿಲ್‌ ಆಕ್ರೋಶಗೊಳ್ಳಲು ಕಾರಣವಿರಬಹುದು ಎಂದು ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದಾರೆ. 

ವಿಮಾನ ಸಂಚಾರದ ವಿಳಂಬದ ಕುರಿತು ಮಾಹಿತಿ ನೀಡುತ್ತಿದ್ದ ಅನೂಪ್‌, ‘ಪ್ರತಿಕೂಲ ಹವಾಮಾನದಿಂದಾಗಿ ಸಂಚಾರ ವಿಳಂಬವಾಗಿದೆ. ಅದರ ಜೊತೆಗೆ ನೀವು ಪದೇ ಪದೇ ಸಾಕಷ್ಟು ಪ್ರಶ್ನೆಗಳನ್ನು ಹಾಕುತ್ತಿದ್ದೀರಿ. ಹೀಗಾಗಿ ವಿಮಾನ ಸಂಚಾರಕ್ಕೆ ಇದ್ದ ನಮ್ಮ ಸರದಿಯನ್ನು ನಾವು ಮಿಸ್‌ ಮಾಡಿಕೊಂಡಿದ್ದೇವೆ. 

ಮತ್ತೆ ನಮ್ಮ ಸರದಿ ಬರುವವರೆಗೂ ಕಾಯಬೇಕಿದೆ. ಹೀಗಾಗಿ ಸಂಚಾರ ಇನ್ನಷ್ಟು ವಿಳಂಬವಾಗಲಿದೆ’ ಎಂದು ಹೇಳಿದ್ದಾರೆ. ಈ ವೇಳೆ ಸಾಹಿಲ್‌ ಎದ್ದು ಬಂದು ದಾಳಿ ನಡೆಸಿದರು ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ವಿಮಾನ ಕಾರ್ಯಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಆದರೆ ವಿಳಂಬದ ಸಮಯದಲ್ಲಿ ವಿಮಾನ ಸಿಬ್ಬಂದಿಯ ಮೇಲೆ ಈ ರೀತಿ ಪ್ರಯಾಣಿಕರ ಅನುಚಿತ ವರ್ತನೆಯನ್ನು ಒಪ್ಪಲಾಗದು ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.