ಸಾರಾಂಶ
ಜಲಗಾಂವ್ ಬಳಿ ತಾವಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿದ ಕಾರಣ, ಆ ರೈಲಿನಿಂದ ಜಿಗಿದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಪಕ್ಕದ ಹಳಿ ಮೇಲೆ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದಿದೆ. ಆಗ 12 ಜನರು ದಾರುಣ ರೀತಿಯಲ್ಲಿ ಮೃತಪಟ್ಟು 50ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಜಲಗಾಂವ್ : ಮತ್ತೊಂದು ಭೀಕರ ರೈಲು ಅವಘಡ ಸಂಭವಿಸಿದೆ. ಮಹಾರಾಷ್ಟ್ರದ ಜಲಗಾಂವ್ ಬಳಿ ತಾವಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿದ ಕಾರಣ, ಆ ರೈಲಿನಿಂದ ಜಿಗಿದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಪಕ್ಕದ ಹಳಿ ಮೇಲೆ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದಿದೆ. ಆಗ 12 ಜನರು ದಾರುಣ ರೀತಿಯಲ್ಲಿ ಮೃತಪಟ್ಟು 50ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಜಲಗಾಂವ್ ಜಿಲ್ಲೆಯ ಮಹೆಜಿ ಮತ್ತು ಪರ್ದಾಡೆ ರೈಲು ನಿಲ್ದಾಣಗಳ ನಡುವೆ ಬುಧವಾರ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ರು. ಪರಿಹಾರ ಪ್ರಕಟಿಸಿದೆ ಹಾಗೂ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದೆ. ಸಾವಿನ ಸಂಖ್ಯೆ ಇನ್ನೂ ಏರುವ ಆತಂಕವಿದೆ.
ಆಗಿದ್ದೇನು?:
ಲಖನೌನಿಂದ ಮುಂಬೈಗೆ ಬರುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿ, ಪ್ರಯಾಣಿಕರು ಚೈನ್ ಎಳೆದು ಆ ರೈಲು ನಿಲ್ಲಿಸಿದ್ದರು. ಬೆಂಕಿ ಭಯದಿಂದ ರೈಲಿನಿಂದ ಜಿಗಿದು ಪಕ್ಕದ ಹಳಿ (ಜೋಡಿ ಮಾರ್ಗದ ಇನ್ನೊಂದು ಹಳಿ) ಮೇಲೆ ಬಂದು ನಿಂತಿದ್ದರು. ಇನ್ನು ಕೆಲವರು ರೈಲಿನಿಂದ ದೂರಕ್ಕೆ ಹೋಗಿ ನಿಂತಿದ್ದರು. ಇದೇ ಪಕ್ಕದ ಹಳಿ ಮೇಲೆ ಬೆಂಗಳೂರಿನಿಂದ ದಿಲ್ಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಬಂದಿದೆ. ವೇಗದ ಕಾರಣವಾಗಿ ರೈಲು ನಿಯಂತ್ರಣಕ್ಕೆ ಸಿಗದೆ ಜನರ ಮೇಲೆ ಹರಿದಿದೆ. ಪರಿಣಾಮ ದುರ್ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಹಲವರ ದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿವೆ.
ರೈಲ್ವೆ ಹೇಳಿದ್ದೇನು?:
ಮಧ್ಯ ರೈಲ್ವೆ ವಕ್ತಾರ ಸ್ವಪ್ನಿಲ್ ನಿಲಾ ಮಾತನಾಡಿ, ‘ಬ್ರೇಕ್ ಜಾಮ್ ಅಥವಾ ಹಾಟ್ ಆ್ಯಕ್ಸೆಲ್ ತಾಂತ್ರಿಕ ಕಾರಣದಿಂದ ಒಂದು ಕೋಚ್‌ನಲ್ಲಿ ಕಿಡಿಗಳು ಕಾಣಿಸಿಕೊಂಡಿವೆ. ಇದರಿಂದ ಭೀತಿಗೊಳಗಾದ ಪ್ರಯಾಣಿಕರು ಬೆಂಕಿ ಹೊತ್ತಿಕೊಂಡಿದೆ ಎಂದು ಭಾವಿಸಿ ಚೈನು ಎಳೆದಿದ್ದಾರೆ. ಆಗ ಕೆಲವರು ರೈಲಿಂದ ಜಿಗಿದು ಪಕ್ದ ರೈಲು ಮಾರ್ಗದ ಮೇಲೆ ನಿಂತಿದ್ದಾರೆ. ಆಗ ಅದೇ ವೇಳೆ ಕರ್ನಾಟಕ ಎಕ್ಸ್‌ಪ್ರೆಸ್ ಧಾವಿಸಿ ಹರಿದಿದೆ’ ಎಂದಿದ್ದಾರೆ.
ಘಟನಾ ಸ್ಥಳಕ್ಕೆ ಸಚಿವರು ಅಧಿಕಾರಿಗಳು ಭೇಟಿ:
ಅಪಘಾತ ಸ್ಥಳಕ್ಕೆ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್, ಜಿಲ್ಲಾ ಉಸ್ತುವಾರಿ ಸಚಿವ ಗುಲಾಬ್ ರಾವ್ ಪಟೇಲ್ ಭೇಟಿ ನೀಡಿದ್ದಾರೆ. ಅಧಿಕಾರಿಗಳು ಸಹ ಧಾವಿಸಿದ್ದ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಕ್ಷಣಾ ಕಾರ್ಯ ಸುಗಮವಾಗಿ ನಡೆಯಬೇಕು ಎಂದು ಸೂಚಿಸಿದ್ದಾರೆ.
---ಹಿಂದೆ ನಡೆದ ಭೀಕರ ರೈಲು ದುರಂತ
ಮೇ 20,2010 - ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಪಶ್ಚಿಮ ಬಂಗಾಳ (ಜರ್ಗ್ರಾಂ) - 150ಕ್ಕೂ ಹೆಚ್ಚು ಸಾವು
ನ.20, 2016 - ಇಂದೋರ್ ಪಟನಾ ಎಕ್ಸ್‌ಪ್ರೆಸ್ ಉತ್ತರ ಪ್ರದೇಶ (ಕಾನ್ಪುರ) - 150 ಸಾವು
ಮೇ 8, 2020 - ಔರಂಗಬಾದ್ ರೈಲು ದುರಂತ ಮಹಾರಾಷ್ಟ್ರ(ಔರಂಗಾಬಾದ್) - 16 ಸಾವು
ಜೂ.2, 2023 - ಕೋರಮಂಡಲ್ ಎಕ್ಸ್‌ಪ್ರೆಸ್/ ಬೆಂಗಳೂರು ಎಕ್ಸ್‌ಪ್ರೆಸ್ ಒಡಿಶಾ (ಬಾಹಾನಗ) - 296 ಸಾವು
ಅ.29, 2023 - ಕೊಟ್ಟವಲ್ಸಾ ರೈಲ್ವೆ ನಿಲ್ದಾಣ ಆಂಧ್ರ ಪ್ರದೇಶ (ಕೊಟ್ಟವಲ್ಸ) - 14 ಸಾವು
ಜೂ.17, 2024 - ಕಾಂಚನಜುಂಗಾ ಎಕ್ಸ್‌ಪ್ರೆಸ್ ಪಶ್ಚಿಮ ಬಂಗಾಳ (ಡಾರ್ಜಲಿಂಗ್) - 11 ಸಾವು