ತನ್ನ ಕಡುವೈರಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣ ಭಾರತದ ವಸ್ತುಗಳ ಆಮದಿನ ಮೇಲೆ ಹೇರಲಾಗಿರುವ ಹೆಚ್ಚುವರಿ ಶೇ.25ರಷ್ಟು ತೆರಿಗೆಯನ್ನು ಕೈಬಿಡುವ ಬಗ್ಗೆ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಸುಳಿವು ನೀಡಿದ್ದಾರೆ.

ತೆರಿಗೆ ಹೇರಿಕೆ ಬಳಿಕ ರಷ್ಯಾ ತೈಲ ಆಮದು ಇಳಿಕೆ

ಇದು ನಮ್ಮ ಯಶಸ್ಸು, ಈಗ ರದ್ದತಿಗೆ ದಾರಿ ಇದೆ ಬೆಸೆಂಟ್‌

ಅಮೆರಿಕದ ಹಣಕಾಸು ಸಚಿವ ಸ್ಕಾಟ್‌ ಬೆಸೆಂಟ್‌ ಸುಳಿವುದಾವೋಸ್‌: ತನ್ನ ಕಡುವೈರಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣ ಭಾರತದ ವಸ್ತುಗಳ ಆಮದಿನ ಮೇಲೆ ಹೇರಲಾಗಿರುವ ಹೆಚ್ಚುವರಿ ಶೇ.25ರಷ್ಟು ತೆರಿಗೆಯನ್ನು ಕೈಬಿಡುವ ಬಗ್ಗೆ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಸುಳಿವು ನೀಡಿದ್ದಾರೆ.

ದಾವೋಸ್‌ನಲ್ಲಿ ಪೊಲಿಟಿಕೋ ಸುದ್ದಿಸಂಸ್ಥೆ ಜತೆ ಮಾತನಾಡಿದ ಬೆಸೆಂಟ್‌, ‘ನಾವು ಹೇರಿರುವ ತೆರಿಗೆಯಿಂದಾಗಿ ಭಾರತದ ಸಂಸ್ಕರಣಾ ಘಟಕಗಳು ರಷ್ಯಾದಿಂದ ತರಿಸಿಕೊಳ್ಳುವ ತೈಲದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇದನ್ನು ನಮ್ಮ ತೆರಿಗೆಯ ಯಶಸ್ಸು ಎಂದೇ ಪರಿಗಣಿಸುತ್ತೇವೆ. ಆ ತೆರಿಗೆ ಇನ್ನೂ ಜಾರಿಯಲ್ಲಿದೆಯಾದರೂ ಅದನ್ನು ತೆಗೆದುಹಾಕಲು ರಾಜತಾಂತ್ರಿಕ ಮಾರ್ಗ ತೆರೆದಿದೆ’ ಎಂದು ಹೇಳಿದ್ದಾರೆ.

ಜತೆಗೆ, ‘ಭಾರತ ತನ್ನ ಇಂಧನ ಮೂಲವನ್ನು ಬದಲಾಯಿಸಿದರೆ ಹಾಗೂ ಅಮೆರಿಕಕ್ಕೆ ಅದರಿಂದ ನೇರ ಲಾಭವಾಗುವಂತಿದ್ದರೆ ಇದು ಸಾಧ್ಯ’ ಎನ್ನುವ ಮೂಲಕ, ರಷ್ಯಾ ತೈಲದ ಮೇಲಿನ ಅವಲಂಬನೆಯನ್ನು ಬಿಟ್ಟು ಭಾರತ ಇದಕ್ಕಾಗಿ ಅಮೆರಿಕವನ್ನು ನೆಚ್ಚಿಕೊಳ್ಳಲಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ರಷ್ಯಾದಿಂದ ತೈಲ ತರಿಸಿಕೊಳ್ಳುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ತೆರಿಗೆ ಹೇರುವ ಮಸೂದೆಯನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಲು ಒಪ್ಪಿಗೆ ಸಿಕ್ಕಿರುವ ಹೊತ್ತಿನಲ್ಲೇ ಬೆಸೆಂಟ್‌ರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈ ಬಗ್ಗೆ ಭಾರತದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ನಡುವೆ ಭಾರತದ ಮೇಲೆ ತೆರಿಗೆ ಹಾಕದೇ ಇರುವ ಯುರೋಪಿಯನ್‌ ಒಕ್ಕೂಟದ ಕ್ರಮವನ್ನೂ ಬೆಸೆಂಟ್‌ ಟೀಕಿಸಿದ್ದಾರೆ. ಅವರಿಗೆ ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕಿದೆ. ಆ ಕಾರಣಕ್ಕಾಗಿಯೇ ಅವರು ಭಾರತದ ಉತ್ಪನ್ನಗಳ ಆಮದಿನ ಮೇಲೆ ತೆರಿಗೆ ಹಾಕಿಲ್ಲ ಎಂದು ಕಿಡಿಕಾರಿದ್ದಾರೆ.

==

ಕೆನಡಾಗೆ 100% ತೆರಿಗೆ: ಟ್ರಂಪ್‌

ಚೀನಾದ ಜತೆ ವ್ಯಾಪಾರ ಒಪ್ಪಂದಕ್ಕೆ ಆಕ್ರೋಶ

ವಾಷಿಂಗ್ಟನ್‌: ಜಾಗತಿಕ ಸಮುದಾಯದ ಮೇಲೆ ತೆರಿಗೆ ದಾಳಿ ಎಚ್ಚರಿಕೆ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರಿ ಮತ್ತೆ ಇದೀಗ ಕೆನಡಾದತ್ತ ತಿರುಗಿದೆ. ಚೀನಾ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ, ಕೆನಡಾ ಉತ್ಪನ್ನಗಳ ಮೇಲೆ ಶೇ.100ರಷ್ಟು ತೆರಿಗೆ ಹೇರುವುದಾಗಿ ಟ್ರಂಪ್‌ ಎಚ್ಚರಿಸಿದ್ದಾರೆ.ಇತ್ತೀಚೆಗೆ ಕೆನಡಾ- ಚೀನಾ ನಡುವೆ ಪ್ರಾಥಮಿಕ ಹಂತದ ವ್ಯಾಪಾರ ಒಪ್ಪಂದ ಆದಾಗ ಅದನ್ನು ಟ್ರಂಪ್‌ ಸ್ವಾಗತಿಸಿದ್ದರು. ಆದರೆ ಇತ್ತೀಚೆಗೆ ಗ್ರೀನ್‌ಲ್ಯಾಂಡ್‌ ವಶ ಕುರಿತ ತಮ್ಮ ನಿರ್ಧಾರವನ್ನು ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಟೀಕಿಸಿದ ಬೆನ್ನಲ್ಲೇ, ಟ್ರಂಪ್‌ ಉಲ್ಟಾ ಹೊಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್‌, ‘ಕೆನಡಾದ ಮೂಲಕ ಚೀನಾದ ಉತ್ಪನ್ನಗಳನ್ನು ಅಮೆರಿಕದ ಮಾರುಕಟ್ಟೆಗೆ ತಲುಪಿಸಲು ಕಾರ್ನಿ ಚಿಂತಿಸಿದ್ದರೆ ಅವರು ತಪ್ಪು ಮಾಡುತ್ತಿದ್ದಾರೆ. ಚೀನಾ ಜತೆ ವ್ಯಾಪಾರ ಒಪ್ಪಂದ ಮಾಡಿಕೊಂದರೆ ನಾವು ಕೆನಡಾ ಮೇಲೆ ಶೇ.100ರಷ್ಟು ತೆರಿಗೆ ಹೇರುತ್ತೇವೆ’ ಎಂದು ಎಚ್ಚರಿಸಿದ್ದಾರೆ.ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಟ್ರಂಪ್‌ ಇತ್ತೀಚೆಗಷ್ಟೇ, ‘ಕೆನಡಾ ಬದುಕುತ್ತಿರುವುದೇ ಅಮೆರಿಕದಿಂದಾಗಿ’ ಎಂದಿದ್ದರು. ಇದರಿಂದ ಕೆಂಡವಾಗಿದ್ದ ಕಾರ್ನಿ, ‘ಕೆನಡಾ ಇರುವುದು ಕೆನಡಿಯನ್ನರಿಂದ’ ಎಂದಿದ್ದರು. ಅದರ ಬೆನ್ನಲ್ಲೇ ಕುಪಿತರಾದ ಟ್ರಂಪ್‌, ತಾವು ರಚಿಸಿರುವ ಶಾಂತಿ ಮಂಡಳಿಗೆ ಸೇರುವಂತೆ ಅವರಿಗೆ ನೀಡಿದ್ದ ಆಹ್ವಾನವನ್ನು ಹಿಂಪಡೆದಿದ್ದರು.

==

ಅಮೆರಿಕದ ದಾಳಿ ನಡೆಸಿದ್ರೆ ಯುದ್ದ ಎಂದು ಪರಿಗಣನೆ: ಇರಾನ್‌ ಗುಡಗು

ನಮ್ಮ ಸೇನೆ ಅತಿಕೆಟ್ಟ ಪರಿಸ್ಥಿತಿಗೂ ಸಿದ್ಧವಾಗಿದೆ

ಖಮೇನಿ ಬಂಕರ್‌ನಲ್ಲಿ ಅವಿತಿಲ್ಲ: ಇರಾನ್‌ ದೂತ

ಟೆಹ್ರಾನ್‌: ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚುವ ಬೆಳವಣಿಗೆಯಾಗಿದೆ. ‘ಅಮೆರಿಕದ ಕಡೆಯಿಂದ ಆಗುವ ಸಣ್ಣ ದಾಳಿಯನ್ನೂ ನಾವು ಪೂರ್ಣಪ್ರಮಾಣದ ಯುದ್ಧವೆಂದು ಪರಿಗಣಿಸಿ ಪ್ರತಿಕ್ರಿಯಿಸುತ್ತೇವೆ’ ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ಉಪಸ್ಥಿತಿ ಹೆಚ್ಚುತ್ತಿರುವ ನಡುವೆಯೇ ಈ ಬೆಳವಣಿಗೆಯಾಗಿರುವುದು ಗಮನಾರ್ಹ.

ಇರಾನ್‌ನ ಹಿರಿಯ ಸೇನಾಧಿಕಾರಿಯೊಬ್ಬರು ಮಾತನಾಡಿ, ‘ಅಮೆರಿಕದ ಈ ಸೇನಾ ಜಮಾವಣೆಯು ಮುಖಾಮುಖಿ ಹೊಡೆದಾಟದ ಉದ್ದೇಶ ಹೊಂದಿಲ್ಲ ಎಂದು ನಾವು ಭಾವಿಸಿದ್ದೇವೆ. ಆದರೂ ನಮ್ಮ ಸೇನೆ ಅತಿಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಇರಾನ್‌ನಲ್ಲಿ ಕಟ್ಟೆಚ್ಚರ ಸಾರಲಾಗಿದೆ. ಅವರು ಸೀಮಿತ, ಅನಿಯಮಿತ, ಸರ್ಜಿಕಲ್‌ ದಾಳಿ ಹೆಸರಲ್ಲಿ ಏನೇ ಮಾಡಿದರೂ ನಾವು ಅದನ್ನು ಪೂರ್ಣಪ್ರಮಾಣದ ಆಕ್ರಮಣ ಎಂದೇ ಭಾವಿಸುತ್ತೇವೆ ಹಾಗೂ ಕಠಿಣ ಪ್ರತಿದಾಳಿ ನಡೆಸುತ್ತೇವೆ’ ಎಂದು ಹೇಳಿದ್ದಾರೆ.ಅಮೆರಿಕ ಸೇನಾ ಜಮಾವಣೆ:ಕೆಲ ದಿನಗಳ ಹಿಂದೆ ಇರಾನ್‌ ಮೇಲೆ ದಾಳಿ ನಡೆಸುವ ಪರೋಕ್ಷ ಬೆದರಿಕೆ ಹಾಕಿದ್ದ ಅಮೆರಿಕ, ಮಧ್ಯಪ್ರಾಚ್ಯದಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಹೆಚ್ಚು ಮಾಡುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿದ್ದ ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್‌, 3 ಡೆಸ್ಟ್ರಾಯರ್‌ ಹಡಗುಗಳನ್ನು ಅತ್ತ ಕಳಿಸುತ್ತಿದೆ. ಈಗಾಗಲೇ ಅಮೆರಿಕದ 40,000 ಪಡೆಗಳು ಮಧ್ಯಪ್ರಾಚ್ಯದಲ್ಲಿವೆ. ‘ಪ್ರತಿಭಟನಾಕಾರರ ವಿರುದ್ಧದ ಕ್ರಮವನ್ನು ಇರಾನ್‌ ಮುಂದುವರೆಸಿದರೆ ಸೇನಾ ಕ್ರಮವನ್ನು ಕೈಗೊಳ್ಳಲಾಗುವುದು. ಆ ದಾಳಿ, ಕಳೆದ ಬಾರಿ ಇರಾನ್‌ನ ಅಣುಸ್ಥಾವರಗಳನ್ನು ಗುರಿಯಾಗಿಸಿ ನಡೆದ ದಾಳಿಗಿಂತ ಭೀಕರವಾಗಿರಲಿದೆ’ ಎಂದೂ ಟ್ರಂಪ್‌ ಎಚ್ಚರಿಸಿದ್ದರು.

==ಖಮೇನಿ ಅಡಗಿ ಕೂತಿಲ್ಲ:

ನಾಗರಿಕ ದಂಗೆ ಮತ್ತು ಅಮೆರಿಕ ದಾಳಿಗೆ ಬೆದರಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖಮೇನಿ ಬಂಕರ್‌ನಲ್ಲಿ ಅಡಗಿ ಕುಳಿತಿದ್ದಾರೆ ಎಂಬುದನ್ನು ಮುಂಬೈನಲ್ಲಿರುವ ಇರಾನ್‌ನ ರಾಯಭಾರಿ ತಳ್ಳಿಹಾಕಿದ್ದು, ‘ಇದೆಲ್ಲಾ ಬರೀ ವದಂತಿ. ನಾವು ಯಾವ ಬಾಹ್ಯ ಶಕ್ತಿಗೂ ಹೆದರುವುದಿಲ್ಲ. ಅವರಿಗೆ ಭದ್ರತೆಯಿರುವುದು ಸಹಜ. ಹಾಗೆಂದಮಾತ್ರಕ್ಕೆ ಅವರು ಬಂಕರ್‌ನಲ್ಲಿ ಅವಿತಿದ್ದಾರೆ ಎಂದಲ್ಲ. ಖಮೇನಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸುತ್ತಿದ್ದಾರೆ’ ಎಂದಿದ್ದಾರೆ.