ಸಾರಾಂಶ
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಹಿಂದಿನ ವೈಎಸ್ಆರ್ಸಿಪಿ ಆಡಳಿತದ ಅವಧಿಯಲ್ಲಿ ತಿರುಪತಿ ಲಡ್ಡು ವಿಷಯದಲ್ಲಿ ನಡೆದಿರುವ ಪಾಪಗಳಿಗೆ ಪ್ರಾಯಶ್ಚಿತ್ತ ದೀಕ್ಷೆಯನ್ನು ಅಂತ್ಯಗೊಳಿಸಿದರು.
ತಿರುಪತಿ: ಹಿಂದಿನ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ತಿರುಪತಿ ಲಡ್ಡು ವಿಷಯದಲ್ಲಿ ನಡೆದಿರುವ ಪಾಪಗಳ ಪರಿಹಾರಕ್ಕಾಗಿ ಕೈಗೊಂಡಿದ್ದ ಪ್ರಾಯಶ್ಚಿತ್ತ ದೀಕ್ಷೆಯನ್ನು ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಬುಧವಾರ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಅಂತ್ಯಗೊಳಿಸಿದ್ದಾರೆ. ಈ ವೇಳೆ ಕಲ್ಯಾಣ್ ಅವರು ಮಾತೃಶ್ರೀ ತರಿಗೊಂಡ ವೆಂಗಮಾಂಬಾ ನಿತ್ಯ ಅನ್ನದಾನ ಕೇಂದ್ರವನ್ನೂ ಉದ್ಘಾಟಿಸಿದರು.
ವೆಂಕಟೇಶ್ವರನಲ್ಲಿ ನಂಬಿಕೆಯಿದೆ: ಪವನ್‌ರ ಕ್ರೈಸ್ತ ಪುತ್ರಿ ಘೋಷಣೆ
ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಲ್ಯಾಣ್ ಅವರ ಕಿರಿಯ ಪುತ್ರಿ ಪಲಿನಾ ಅಂಜನಿ, ತಾವು ವೆಂಕಟೇಶ್ವರ ಸ್ವಾಮಿಯಲ್ಲಿ ನಂಬಿಕೆ ಹೊಂದಿರುವುದಾಗಿ ಘೋಷಿಸಿದ್ದಾರೆ. ಆಕೆ ಅಪ್ರಾಪ್ತೆಯಾದ ಕಾರಣ ಪವನ್ ಕಲ್ಯಾಣ್ ಈ ಘೋಷಣೆಯನ್ನು ಅನುಮೋದಿಸಿದ್ದಾರೆ.
ಟಿಟಿಡಿಯ ನಿಯಮದ ಪ್ರಕಾರ ಹಿಂದು ಅಲ್ಲದವರು ಮತ್ತು ವಿದೇಶಿಗರು ದೇವಸ್ಥಾನ ಪ್ರವೇಶಕ್ಕೂ ಮುನ್ನ ತಮ್ಮ ನಂಬಿಕೆಯನ್ನು ಘೋಷಿಸಿಕೊಳ್ಳಬೇಕು. ಅದರ ಭಾಗವಾಗಿ ಕಲ್ಯಾಣ್‌ರ 3ನೇ ಮಡದಿ ಅನ್ನಾ ಲೆಜ್ನೆವಾರ ಮಗಳು, ಅಂತೆಯೇ ವಿದೇಶಿ ಪ್ರಜೆಯಾಗಿರುವ ಪಲಿನಾ ಈ ಘೋಷಣೆಗೆ ಸಹಿ ಹಾಕಿದ್ದಾರೆ. ಪವನ್ ಕಲ್ಯಾಣ್ ಹಿಂದೂ ಧರ್ಮದ ಪಾಲಕರಾದರೂ ಅವರ ಮಗಳು ಕ್ರೈಸ್ತ ಧರ್ಮದ ಅನುಯಾಯಿ ಎಂದು ಈ ಹಿಂದೆ ಪವನ್ ಹೇಳಿದ್ದರು.