ಸಾರಾಂಶ
ನವದೆಹಲಿ: ಜಾಗತಿಕ ಮಟ್ಟದ ‘ಗೋಲ್ಡನ್ ಗ್ಲೋಬ್ಸ್’ ಪ್ರಶಸ್ತಿಯಲ್ಲಿ ಎರಡು ವಿಭಾಗದಲ್ಲಿ ನಾಮನಿರ್ದೇಶನಗೊಂಡು ನಿರೀಕ್ಷೆ ಹುಟ್ಟಿಸಿದ ಭಾರತದ ಪಾಯಲ್ ಕಪಾಡಿಯಾ ನಿರ್ದೇಶನ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಚಿತ್ರಕ್ಕೆ ಪ್ರಶಸ್ತಿ ಕೈತಪ್ಪಿದೆ.ಪಾಯಲ್ ಕಪಾಡಿಯಾ ನಿರ್ದೇಶನ ಈ ಸಿನಿಮಾ 82ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯಲ್ಲಿ ನಿರ್ದೇಶನ ವಿಭಾಗ ಮತ್ತು ಇಂಗ್ಲೀಷೇತರ ಸಿನಿಮಾದಲ್ಲಿ ನಾಮನಿರ್ದೇಶನಗೊಂಡಿತ್ತು. ಆದರೆ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿದೆ. ಈ ಬಗ್ಗೆ ಪಾಯಲ್ ತಮ್ಮ ಇನ್‌ಸ್ಟಾಗ್ರಾಮ್‌ಲ್ಲಿ ಹಂಚಿಕೊಂಡಿದ್ದು, ‘ನಾವು ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ’ ಎಂದಿದ್ದಾರೆ.
ಇನ್ನು ನಿರ್ದೇಶನ ವಿಭಾಗದಲ್ಲಿ ‘ದಿ ಬ್ರೂಟಲಿಸ್ಟ್’ ಖ್ಯಾತಿಯ ಬ್ರಾಡಿ ಕಾರ್ಬೆಟ್ ಪ್ರಶಸ್ತಿ ಪಡೆದಿದ್ದರೆ, ಇಂಗ್ಲೀಷೇತರ ವಿಭಾಗದಲ್ಲಿ ‘ಎಮಿಲಿಯಾ ಪೆರೆಜ್’ ಸಿನಿಮಾ ಗೆದ್ದಿದೆ.
ಬಿಹಾರ ಪರೀಕ್ಷಾ ಅಕ್ರಮ: ಉಪವಾಸ ನಿರತ ಪಿಕೆ ಬಂಧನ, ಬೇಲ್
ಪಟನಾ: ಬಿಹಾರ ಲೋಕಸೇವಾ ಆಯೋಗದ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಗಾಂಧಿ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜನ ಸೂರಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್‌ರನ್ನು ಸೋಮವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಸಂಜೆ ಅವರಿಗೆ ಜಾಮೀನು ಸಿಕ್ಕಿದೆ.
‘ನಿಷೇಧಿತ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ (ಪಿಕೆ) ಮತ್ತು ಅವರ ಬೆಂಬಲಿಗರು ಧರಣಿ ನಡೆಸುತ್ತಿದ್ದರು. ಇದು ಕಾನೂನುಬಾಹಿರ ಆದ್ದರಿಂದ ಅವರನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ. ಪ್ರಶಾಂತ್ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿತ್ತು. ಡಿ.13ರಂದು ನಡೆದ ಪಿಎಸ್‌ಸಿ ಪರೀಕ್ಷೆ ಪತ್ರಿಕೆ ಸೋರಿಕೆ ಆಗಿತ್ತು.