ಕಾಶ್ಮೀರದ ವಿಧಾನಸಭಾ ಚುನಾವಣೆ :ವಿಶೇಷ ಸ್ಥಾನಮಾನ ಮರು ಸ್ಥಾಪನೆ, ಎಲ್ಲರಿಗೂ ಉಚಿತ ವಿದ್ಯುತ್‌: ಪಿಡಿಪಿ ಭರವಸೆ

| Published : Aug 25 2024, 01:57 AM IST / Updated: Aug 25 2024, 04:35 AM IST

ಸಾರಾಂಶ

ಮುಂದಿನ ತಿಂಗಳಲ್ಲಿ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗೆ ಪಿಡಿಪಿ ಶನಿವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಶ್ರೀನಗರ: ಮುಂದಿನ ತಿಂಗಳಲ್ಲಿ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗೆ ಪಿಡಿಪಿ ಶನಿವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. 2019ರಲ್ಲಿ ಕೇಂದ್ರ ಸರ್ಕಾರ ರದ್ದು ಮಾಡಿದ, ವಿಶೇಷ ಸ್ಥಾನಮಾನ ಮರುಸ್ಥಾಪನೆ, ಭಾರತ- ಪಾಕ್‌ ನಡುವೆ ರಾಜತಾಂತ್ರಿಕ ಸಂಬಂಧ ಪುನಾರಣಂಭ, ಪಾಕ್‌ ಜೊತೆ ವ್ಯಾಪಾರ ಮತ್ತು ಸಾಮಾಜಿಕ ವಿನಿಮಯಕ್ಕಾಗಿ ಗಡಿ ನಿಯಂತ್ರಣ ರೇಖೆ ಸುತ್ತಲೂ ಸಂಪರ್ಕ ಸ್ಥಾಪಿಸುವುದು, ಸಾರ್ವಜನಿಕ ಸುರಕ್ಷತಾ ಕಾಯಿದೆ (ಪಿಎಸ್‌ಎ), ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ, ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ರದ್ದುಗೊಳಿಸಲಾಗುವುದು ಎಂದು ಪಕ್ಷ ಭರವಸೆ ನೀಡಿದೆ.

 ಜೊತೆಗೆ ಎಲ್ಲಾ ನಾಗರಿಕರಿಗೆ ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್‌, ದೇಗುಲ, ಮಸೀದಿ, ಚರ್ಚ್‌ಗಳಿಗೆ ಉಚಿತ ವಿದ್ಯುತ್‌, ರಾಜ್ಯಕ್ಕೆ ಮರಳುವ ಕಾಶ್ಮೀರಿ ಪಂಡಿತರಿಗೆ 2 ಬೆಡ್‌ರೂಂ ಮನೆ ನೀಡುವ ಭರವಸೆ ನೀಡಿದೆ.

==

ಪರಾರಿ ಯತ್ನದ ವೇಳೆ ಕೆರೆಗೆ ಬಿದ್ದು ರೇಪಿಸ್ಟ್ ಸಾವು

ಗುವಾಹಟಿ: ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಮುಖ ಆರೋಪಿ ಶನಿವಾರ ನಸುಕಿನ ವೇಳೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.ಮೃತನ ಹೆಸರು 24 ವರ್ಷದ ತಫಾಜುಲ್ ಇಸ್ಲಾಂ. ಈತ ನಾಗಾಂವ್‌ನ ದಿಂಗ್ ಪ್ರದೇಶದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ.ಇಸ್ಲಾಂನನ್ನು ಶುಕ್ರವಾರ ಬಂಧಿಸಲಾಗಿತ್ತು. ಪೊಲೀಸರು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಆರೋಪಿಯನ್ನು ತಡರಾತ್ರಿ 3.30 ರ ಸುಮಾರಿಗೆ ಅಪರಾಧ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ, ತಪ್ಪಿಸಿಕೊಳ್ಳಲು ಯತ್ನಿಸಿದ ಆತ ಕೊಳಕ್ಕೆ ಜಿಗಿದಿದ್ದಾನೆ. ತಕ್ಷಣ ಶೋಧ ಕಾರ್ಯಾಚರಣೆ ನಡೆಸಿದರೂ 2 ತಾಸಿನ ಬಳಿಕ ಆತ ಶವವಾಗಿ ಸಿಕ್ಕ ಎಂದು ಪೊಲೀಸರು ಹೇಳಿದ್ದಾರೆ.

14 ವರ್ಷದ ಬಾಲಕಿ ಗುರುವಾರ ಸಂಜೆ ಧಿಂಗ್‌ನಲ್ಲಿ ತನ್ನ ಸೈಕಲ್‌ನಲ್ಲಿ ಟ್ಯೂಷನ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ 3 ವ್ಯಕ್ತಿಗಳು ಅವಳನ್ನು ಸುತ್ತುವರೆದು ಅತ್ಯಾಚಾರ ಎಸಗಿದ್ದರು. ಈ ಘಟನೆಯು ಅಸ್ಸಾಂನಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ವ್ಯಾಪಕ ಪ್ರತಿಭಟನೆ ನಡೆದಿವೆ.

==

2 ವರ್ಷದಲ್ಲಿ ನಕ್ಸಲ್‌ ಹಾವಳಿ ಅಂತ್ಯ; ಈವರೆಗೆ ದಾಳಿಗೆ 17000 ಜನ ಬಲಿ: ಅಮಿತ್‌

ರಾಯ್ಪುರ: ಭಾರತ 2026ರ ಮಾರ್ಚ್‌ ಒಳಗೆ ಎಡಪಂಥೀಯ ಉಗ್ರವಾದದಿಂದ ಮುಕ್ತವಾಗುತ್ತದೆ ಎಂದು ಗೃಹ ಸಚಿವ ಅಮಿತ್‌ ಶಾ ಶನಿವಾರ ಹೇಳಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ, ಹಿರಿಯ ಕೇಂದ್ರ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ರಾಜ್ಯದ ಮಾವೋವಾದಿ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ ಬಳಿಕ ನಡೆದ ಸುದ್ದಿಗೋಷ್ಠಿ ಶಾ ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.‘ನಕ್ಸಲ್‌ ಹಾವಳಿಯು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, 17,000 ಜನರನ್ನು ಬಲಿ ಪಡೆದಿದೆ. 2004-14ಕ್ಕೆ ಹೋಲಿಸಿದರೆ 2014-24 ಅವಧಿಯಲ್ಲಿ ಇದು ಶೇ.53ರಷ್ಟು ಇಳಿಕೆಯಾಗಿದೆ. ನಕ್ಸಲರ ವಿರುದ್ಧ ಕೊನೆಯ ದಾಳಿ ನಡೆಸಲು ಇದು ಸಮಯವಾಗಿದ್ದು, ಅದಕ್ಕಾಗಿ ಬಲಶಾಲಿ ಮತ್ತು ನಿರ್ದಯ ತಂತ್ರಗಾರಿಕೆಯ ಅಗತ್ಯವಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಭದ್ರತೆಯ ಕೊರತೆಯನ್ನು ನೀಗಿಸಲು ಸರ್ಕಾರ ಶ್ರಮಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

==

ಬಾಂಗ್ಲಾದಿಂದ ಹಿಂದೂಗಳು ವಸಲೆ ಬರುತ್ತಿಲ್ಲ, ಬರೋದು ಮುಸ್ಲಿಮರು ಮಾತ್ರ: ಹಿಮಂತಾ

ಸಿಲ್ಚಾರ್‌: ನೆರೆಯ ಬಾಂಗ್ಲಾದೇಶದಲ್ಲಿ ಅಸ್ಥಿರತೆ ಪ್ರಾರಂಭವಾದಾಗಿನಿಂದ ಅಲ್ಲಿನ ಒಬ್ಬ ಹಿಂದುವೂ ಭಾರತ ಪ್ರವೇಶಿಸಲು ಪ್ರಯತ್ನಿಸಿಲ್ಲ ಎಂದು ಅಸ್ಸಾಂ ಮುಖ್ಯಮಮತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಂಗ್ಲಾದಲ್ಲಿ ಗಲಭೆಗಳು ಶುರುವಾದಾಗಿನಿಂದ ಹಿಂದೂಗಳು ಅಲ್ಲೇ ಇದ್ದು ಹೋರಾಡುತ್ತಿದ್ದಾರೆ. ಭಾರತವನ್ನು ಪ್ರವೇಶಿಸಲು ಒಬ್ಬನೂ ಪ್ರಯತ್ನಿಸಿಲ್ಲ. ಬದಲಿಗೆ ಮುಸ್ಲಿಮರು ಗಡಿ ನುಸುಳಲು ಪ್ರಯತ್ನಿಸುತ್ತಿದ್ದಾರೆ’ ಎಂದಿದ್ದಾರೆ. ಕಳೆದ ಒಂದು ತಿಂಗಳಲ್ಲಿ 35 ಮುಸ್ಲಿಂ ಒಳನುಸುಳುಕೋರರನ್ನು ಬಂಧಿಸಲಾಗಿದ್ದು, ಅವರೆಲ್ಲ ಅಸ್ಸಾಂಗೆ ಬರುತ್ತಿಲ್ಲ. ಬದಲಿಗೆ ಬೆಂಗಳೂರು, ತಮಿಳು ನಾಡು, ಕೊಯಂಬತೂರ್‌ನ ಜವಳಿ ಉದ್ಯಮದಲ್ಲಿ ಕೆಲಸ ಅರಸಿ ಬರುತ್ತಿದ್ದಾರೆ ಎಂದಿರುವ ಬಿಸ್ವಾ, ಬಾಂಗ್ಲಾದ ಹಿಂದೂಗಳ ಸುರಕ್ಷತೆಯನ್ನು ಖಚಿತಪಡಿಸುವಂತೆ ಬಾಂಗ್ಲಾ ಸರ್ಕಾರಕ್ಕೆ ಒತ್ತಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.