ಸಾರಾಂಶ
ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಹಿಂಸೆ ಮತ್ತು ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರವು ತ್ರಿಪುರದಲ್ಲಿನ 2 ಬಂಡುಕೋರ ಗುಂಪುಗಳೊಂದಿಗೆ ರಾಜ್ಯ ಸರ್ಕಾರದ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸಚಿವ ಅಮಿತ್ ಶಾ ಈ ಒಪ್ಪಂದವನ್ನು ಹೃದಯಗಳನ್ನು ಬೆಸೆಯುವ ಒಪ್ಪಂದ ಎಂದು ಬಣ್ಣಿಸಿದ್ದಾರೆ.
ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರ ಸಮ್ಮಖದಲ್ಲಿ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ (ಎನ್‌ಎಲ್‌ಎಫ್‌ಟಿ) ಮತ್ತು ಆಲ್ ತ್ರಿಪುರ ಟೈಗರ್ ಫೋರ್ಸ್ (ಎಟಿಟಿಎಫ್) ಸಂಘಟನೆಯ ಪ್ರತಿನಿಧಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದದ ಅನ್ವಯ, 328 ಬಂಡುಕೋರರು ತಮ್ಮ ಶಸ್ತ್ರಗಳನ್ನು ತ್ಯಾಗ ಮಾಡಿ, ಮುಖ್ಯಭೂಮಿಯಲ್ಲಿ ತೊಡಗಿಕೊಳ್ಳುಲಿದ್ದಾರೆ. ಜೊತೆಗೆ ಇಲ್ಲಿನ ಪ್ರಾಂತ್ಯಗಳ ಅಭಿವೃದ್ಧಿಗೆ 2500 ಕೋಟಿ ರು. ಯೋಜನೆಯನ್ನು ಘೋಷಿಸಿದರು.
ಈ ಹಿಂದೆಯೂ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಅಸ್ಸಾಂ ಮತ್ತು ಇತರೆ ಈಶಾನ್ಯ ರಾಜ್ಯಗಳಲ್ಲಿ 12 ಶಾಂತಿ ಒಪ್ಪಂದವಾಗಿವೆ. ಇದರಿಂದಾಗಿ 10,000ಕ್ಕೂ ಹೆಚ್ಚಿನ ಜನರು ತಮ್ಮ ಆಯುಧಗಳನ್ನು ತ್ಯಾಗ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅಮಿತ್ ಶಾ,‘ ಪ್ರಧಾನಿ ನರೇಂದ್ರ ಮೋದಿ ಅವರ ಅಷ್ಟಲಕ್ಷ್ಮೀ ಪರಿಕಲ್ಪನೆ ಅಡಿಯಲ್ಲಿ ಪೂರ್ವೋದಯ ಯೋಜನೆ ಜೊತೆಗೆ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಗೆ ಒತ್ತು ನೀಡಲಾಗಿದೆ. ಮೋದಿ ಸರ್ಕಾರದಲ್ಲಿ ಕೇವಲ ಪೇಪರ್ ಮೇಲೆ ಒಪ್ಪಂದ ಮಾಡಿಕೊಳ್ಳದೆ. ಎಲ್ಲಾ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಇದರಿಂದಾಗಿ ಇಲ್ಲಿನ ರಾಜ್ಯಗಳು ಮುಖ್ಯ ಭೂಮಿಕೆಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿವೆ’ ಎಂದರು.