ಸಂಕಷ್ಟದ ಈ ಸಮಯದಲ್ಲಿ ಭಾರತೀಯರ ದೃಢ ಬೆಂಬಲ ಇಸ್ರೇಲ್‌ನೊಂದಿಗೆ ಇರಲಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಯುದ್ಧಪೀಡಿತ ಇಸ್ರೇಲ್‌ಗೆ ಅಭಯ ನೀಡಿದ್ದಾರೆ.

ನವದೆಹಲಿ: ‘ಸಂಕಷ್ಟದ ಈ ಸಮಯದಲ್ಲಿ ಭಾರತೀಯರ ದೃಢ ಬೆಂಬಲ ಇಸ್ರೇಲ್‌ನೊಂದಿಗೆ ಇರಲಿದೆ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಯುದ್ಧಪೀಡಿತ ಇಸ್ರೇಲ್‌ಗೆ ಅಭಯ ನೀಡಿದ್ದಾರೆ. ಕಳೆದ 4 ದಿನಗಳಿಂದ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಸಂಘರ್ಷದ ಬೆಳವಣಿಗೆ ಕುರಿತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಮಂಗಳವಾರ ಪ್ರಧಾನಿ ನರೇಂದ್ರ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ವೇಳೆ ಮೋದಿ ಈ ಅಭಯ ನೀಡಿದ್ದಾರೆ. ಇಸ್ರೇಲ್‌ ಪ್ರಧಾನಿ ಕರೆ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ‘ಸದ್ಯದ ಬೆಳವಣಿಗೆಗಳ ಕುರಿತು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಭಾರತೀಯರು ದೃಢವಾಗಿ ಇಸ್ರೇಲ್‌ನೊಂದಿಗೆ ಇರಲಿದ್ದಾರೆ. ಭಾರತ ಅತ್ಯಂತ ದೃಢ ಮತ್ತು ನಿಸ್ಸಂದಿಗ್ಧವಾಗಿ ಎಲ್ಲಾ ಮಾದರಿಯ ಭಯೋತ್ಪಾದನೆ ಮತ್ತು ಅದರ ಮಾದರಿಗಳನ್ನು ಖಂಡಿಸುತ್ತದೆ’ ಎಂದು ಹೇಳಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಕಳೆದ ಶನಿವಾರ ಸಾವಿರಾರು ರಾಕೆಟ್‌ ಹಾರಿಸಿ, ದೇಶದ ಗಡಿಯೊಳಗೆ ನುಗ್ಗಿ ನೂರಾರು ಜನರನ್ನು ಹತ್ಯೆಗೈದ ಸಮಯದಲ್ಲೂ, ಉಗ್ರ ಕೃತ್ಯವನ್ನು ಬಲವಾಗಿ ಖಂಡಿಸಿದ್ದ ಪ್ರಧಾನಿ ಮೋದಿ, ಇಸ್ರೇಲ್‌ಗೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದರು.