5 ವರ್ಷದಲ್ಲಿ ಐಟಿ ಹೊರಗುತ್ತಿಗೆ ಸೇವೆಗಳು ಮಾಯ
ಮನುಷ್ಯರಿಂದ ಕಲಿತ ಎಐ ಮನುಷ್ಯರ ಕೆಲಸ ಕಸಿಯತ್ತೆವೈದ್ಯ, ಎಂಜಿನಿಯಂರ್ ರೀತಿ 80% ಕೆಲಸ ಎಐ ಮಾಡತ್ತೆ
ನವದೆಹಲಿ: ‘ಕೃತಕ ಬುದ್ಧಿಮತ್ತೆಯಿಂದಾಗಿ(ಎಐ) 5 ವರ್ಷಗಳಲ್ಲಿ ಐಟಿ ಮತ್ತು ಹೊರಗುತ್ತಿಗೆ ಸೇವೆಗಳು ಮಾಯವಾಗಲಿದ್ದಾವೆ. 15 ವರ್ಷಗಳಲ್ಲಿ ಪರಿಣಿತಿ ಬೇಡುವ ಕೆಲಸಗಳು ಇಲ್ಲವಾಗಲಿವೆ’ ಎಂದು ಭಾರತ ಮೂಲದ ಅಮೆರಿಕನ್ ಟೆಕ್ ಉದ್ಯಮಿ, ಕೋಟ್ಯಧಿಪತಿ ವಿನೋದ್ ಖೋಸ್ಲಾ ಹೇಳಿದ್ದಾರೆ.‘ಎಐ ಬಂದು ಹೊಸ ಕಂಪನಿಗಳನ್ನು ಹುಟ್ಟುಹಾಕುತ್ತಿದೆ. ಇಷ್ಟು ವರ್ಷಗಳಲ್ಲಿ ಬಂದ ತಂತ್ರಜ್ಞಾನಗಳು ಕೆಲಸ ಮಾಡುವುದರಲ್ಲಿ ಸಹಾಯ ಮಾಡುತ್ತಿದ್ದರೆ, ಎಐ ಮಾತ್ರ ಮನುಷ್ಯರ ಕೆಲಸವನ್ನು ಮಾಡಲು ಆರಂಭಿಸಿದೆ. ಕಲೆ, ಸಾಹಿತ್ಯದಂತಹ ಸೃಜನಾತ್ಮಕ ಕ್ಷೇತ್ರಗಳು ಇದರಿಂದ ಹೊರತಾಗಿದ್ದರೂ, 5 ವರ್ಷಗಳಲ್ಲಿ ಎಐ ಮಾನವರನ್ನು ಸರಿಗಟ್ಟುತ್ತದೆ. ಅಮೆರಿಕ ಸೇರಿದಂತೆ ವಿಶ್ವದ ಆರ್ಥಿಕತೆಯನ್ನೇ ಪರಿವರ್ತಿಸುತ್ತದೆ’ ಎಂದು ಖೋಸ್ಲಾ ತಿಳಿಸಿದರು.
ಇದನ್ನು ವಿವರಿಸುತ್ತಾ, ‘ಮೊದಮೊದಲು ಎಐ, ಮನುಷ್ಯರ ಕೈಕೆಳಗೆ ಕೆಲಸ ಕಲಿಯುತ್ತವೆ. ಇನ್ನೈದು ವರ್ಷದ ಬಳಿಕ ಏಳುವ ತಂತ್ರಜ್ಞಾನದ ಅಲೆಯೊಂದಿಗೆ ರೋಬೋಟ್‌ಗಳು ಮನೆಗೆಲಸ, ಗದ್ದೆ ಕೆಲಸಗಳನ್ನು ಮಾಡುತ್ತಿರುತ್ತವೆ. ಆ ಕಾರ್ಯಗಳು ಅಗ್ಗದ ಬೆಲೆಯಲ್ಲಿ ಆಗಿಹೋಗುತ್ತವೆ. ಇದರಿಂದ ಹಣದುಬ್ಬರ ಕುಸಿಯುತ್ತದೆ. ಅತ್ತ ಅಕೌಂಟೆಂಟ್, ವೈದ್ಯ, ಚಿಪ್ ವಿನ್ಯಾಸಕ, ವಾಸ್ತುಶಿಲ್ಪಿ ಮತ್ತು ಮಾರಾಟಗಾರ ಎಲ್ಲವೂ ಎಐ ಆಗಿ, ಶೇ.80ರಷ್ಟು ಕೆಲಸಗಳನ್ನು ಅದೇ ಮಾಡುತ್ತದೆ’ ಎಂದರು.
ಭಾರತದಲ್ಲಿ ಇದರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದ ಖೋಸ್ಲಾ, ‘ದೇಶದಲ್ಲಿ ಎಐ ಅಳವಡಿಕೆಯ ಪ್ರಮಾಣವು ರಾಜಕೀಯ ಮತ್ತು ಸರ್ಕಾರದ ನೀತಿಗಳ ಮೇಲೆ ನಿರ್ಧರಿತವಾಗುತ್ತದೆ. ಇನ್ನರ್ಧ ದಶಕದಲ್ಲಿ ಭಾರತ ಎಐ ಉತ್ಪನ್ನ ಮತ್ತು ಸೇವೆಗಳ ಅತಿದೊಡ್ಡ ರಫ್ತದಾರನಾಗಬಹುದು. ಆದರೆ ಐಟಿ ಮತ್ತು ಹೊರಗುತ್ತಿಗೆ ಸೇವೆಗಳು ಮಾಯವಾಗಿರುತ್ತವೆ’ ಎಂದು ವಿವರಿಸಿದರು.