ಸಾರಾಂಶ
ಬದಾಯೂಂ: ರಾಜಸ್ಥಾನದ ಅಜ್ಮೇರ್‌ನ ಮೊಯಿನುದ್ದೀನ್ ಚಿಸ್ತಿ ದರ್ಗಾ, ಉತ್ತರ ಪ್ರದೇಶದ ಸಂಭಲ್ ಮಸೀದಿಗಳನ್ನು ದೇಗುಲ ಧ್ವಂಸಗೊಳಿಸಿ ನಿರ್ಮಿಸಲಾಗಿತ್ತು ಎಂಬ ಆರೋಪದ ನಡುವೆಯೇ, ಉತ್ತರಪ್ರದೇಶದ ಮತ್ತೊಂದು ಮಸೀದಿಯ ವಿರುದ್ಧವೂ ಇಂಥದ್ದೇ ಆರೋಪ ಕೇಳಿಬಂದಿದ್ದು ಭಾರೀ ಸುದ್ದಿ ಮಾಡಿದೆ.ಬದಯೂಂನಲ್ಲಿರುವ 850 ವರ್ಷ ಹಳೆಯದಾದ ಶಾಮ್ಸಿ ಶಾಹಿ ಮಸೀದಿ ಜಾಗದಲ್ಲಿ ಈ ಹಿಂದೆ ನೀಲಕಂಠ ಮಹಾದೇವ ದೇಗುಲವಿತ್ತು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಎಂಬ ಸಂಘಟನೆ ನ್ಯಾಯಾಲಯದಲ್ಲಿ 2022ರಲ್ಲೇ ಪ್ರಕರಣ ದಾಖಲಿಸಿತ್ತು
ಈ ಪ್ರಕರಣದ ಕುರಿತು ಶನಿವಾರ ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ವೇಳೆ ಮಸೀದಿ ಜಾಗ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಮುಸ್ಜಿದ್ ಇಂತೆಝಾಮಿಯಾ ಸಮಿತಿ ವಾದ ಮಂಡಿಸಿದೆ. ಪ್ರಕರಣದಲ್ಲಿ ವಕ್ಫ್ ಸಮಿತಿ ಈಗಾಗಲೇ ತನ್ನ ವಾದ ಪೂರ್ಣಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಡಿ.5ಕ್ಕೆ ಮುಂದೂಡಿದೆ.
ಮಸೀದಿ ಹಿನ್ನೆಲೆ?:
ಬದಾಯೂಂನ ಪ್ರಮುಖ ಮಸೀದಿಯಾಗಿರುವ ಶಮ್ಸಿ ಶಾಹಿ ಮಸೀದಿಗೆ 850 ವರ್ಷಗಳ ಇತಿಹಾಸವಿದೆ. 23500 ಜನರು ಸೇರಬಹುದಾದ ಈ ಮಸೀದಿ ಭಾರತದ 3ನೇ ಅತಿ ಹಳೆಯ ಮತ್ತು 7ನೇ ಅತಿದೊಡ್ಡ ಮಸೀದಿ ಎಂಬ ದಾಖಲೆ ಹೊಂದಿದೆ. ಆದರೆ ಹಿಂದೂ ದೇಗುಲ ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಮುಕೇಶ್ ವಾದಿಸಿ, ಅಲ್ಲಿ ಪೂಜೆಗೆ ಅನುಮತಿ ಕೋರಿದ್ದರು. ಮತ್ತೊಬ್ಬ ಅರ್ಜಿದಾರ ರಾಜ ಮಹಿಪಾಲ್ ಕೋಟೆಯೊಳಗೆ ನೀಲಕಂಠ ಮಹಾದೇವಾಲಯ ದೇವಾಲಯ ಅಸ್ತಿತ್ವದಲ್ಲಿದೆ ಎಂದು ಪ್ರತಿಪಾದಿಸಿದ್ದರು. ಈ ಬಗ್ಗೆ ಪುರಾತತ್ವ ಇಲಾಖೆ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಕೆ ಮಾಡಿತ್ತು.