ಸಾರಾಂಶ
ನವದೆಹಲಿ: ಪ್ರೇಮಸಂದೇಶ ಹೊತ್ತುತರುವ ದೂತನೆಂದು ಗುರುತಿಸಿಕೊಳ್ಳುವ ಪಾರಿವಾಳವೊಂದು ಇದೀಗ ಗಡಿಯಾಚೆಯಿಂದ ಬೆದರಿಕೆ ಸಂದೇಶವನ್ನು ಹೊತ್ತು ತಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಮ್ಮುವಿನ ರೈಲು ನಿಲ್ದಾಣಕ್ಕೆ ಸ್ಫೋಟದ ಬೆದರಿಕೆ ಒಡ್ಡುವ ಚೀಟಿ ಪತ್ತೆಯಾದ ಕಾರಣ ಪಾರಿವಾಳವನ್ನು ವಶಕ್ಕೆ ಪಡೆಯಲಾಗಿದೆ.
ಆರ್.ಎಸ್. ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಕಟ್ಮರಿಯಾ ಪ್ರದೇಶದಲ್ಲಿ ಈ ಪಾರಿವಾಳವನ್ನು ಆಗಸ್ಟ್ 18ರ ರಾತ್ರಿ 9 ಗಂಟೆ ಸುಮಾರಿಗೆ ವಶಕ್ಕೆ ಪಡೆಯಲಾಗಿದೆ. ಪರಿಶೀಲನೆ ನಡೆಸಿದಾಗ, ಅದರ ಕಾಲಿಗೆ ಚೀಟಿಯೊಂದು ಕಟ್ಟಿರುವುದು ಕಂಡುಬಂದಿತ್ತು. ಅದರಲ್ಲಿ ‘ಸ್ವತಂತ್ರ ಕಾಶ್ಮೀರ’, ‘ಸಮಯ ಬಂದಿದೆ’ ಎಂದ ಸಂದೇಶಗಳ ಜತೆಗೆ, ಸುಧಾರಿತ ಸ್ಫೋಟಕ ಬಳಸಿ ಜಮ್ಮು ರೈಲು ನಿಲ್ದಾಣವನ್ನು ಉಡಾಯಿಸುವುದಾಗಿಯೂ ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬೆದರಿಕೆ ಒಡ್ಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಪಾಕಿಸ್ತಾನದ ಕಡೆಯಿಂದ ಬಲೂನ್, ಬಾವುಟ, ಪಾರಿವಾಳಗಳ ಮೂಲಕ ಸಂದೇಶಗಳನ್ನು ಕಳಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪಾರಿವಾಳವೊಂದು ಬೆದರಿಕೆ ಸಂದೇಶ ಹೊತ್ತುತಂದಿದೆ ಎನ್ನಲಾಗಿದೆ.
ಪಾಕ್ ಸಂಚು:
ಪಾರಿವಾಳಕ್ಕೆ ಪಾಕಿಸ್ತಾನದಲ್ಲಿ ತರಬೇತಿ ನೀಡಿ, ಬೆದರಿಕೆ ಸಂದೇಶದೊಂದಿಗೆ ಕಳಿಸಲಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಜಮ್ಮುವಿನಂತಹ ಸೂಕ್ಷ್ಮ ಪ್ರದೇಶಕ್ಕೆ ಬೆದರಿಕೆ ಬಂದಿರುವುದರಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.
ಇದು ಕಿಡಿಗೇಡಿಗಳ ಕೆಲಸವೇ, ಹುಸಿ ಬೆದರಿಕೆಯೇ, ದಾರಿ ತಪ್ಪಿಸುವ ಯತ್ನವೇ ಅಥವಾ ನಿಜವಾಗಿಯೂ ಅಪಾಯವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.