ಸಾರಾಂಶ
ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು 30 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಘಟನೆಯ ಬೆನ್ನಲ್ಲೇ ಕುಂಭಮೇಳದ ಉಳಿದ ದಿನಗಳು ಮತ್ತು ಪವಿತ್ರ ಸ್ನಾನದ ದಿನಗಳಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿ ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಬುಧವಾರದ ಘಟನೆಗೆ ವಿಐಪಿ ಸಂಸ್ಕೃತಿ ಪಾಲಿಸಿದ್ದೇ ಕಾರಣ ಎಂಬ ವಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಕುಂಭಮೇಳ ಪ್ರದೇಶವನ್ನು ಪ್ರವೇಶಿಸಲು ಅತಿಗಣ್ಯರಿಗೆ ನೀಡಲಾಗಿದ್ದ ಪಾಸ್‌ಗಳನ್ನು ರದ್ದುಪಡಿಸಲಾಗಿದೆ. ಜೊತೆಗೆ ಯಾವುದೇ ಗಣ್ಯರ ಆಗಮನಕ್ಕೆ 7 ದಿನ ಮೊದಲೇ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.
ಇದರ ಜೊತೆಗೆ ಕುಂಭಮೇಳ ನಡೆವ ಪ್ರದೇಶಕ್ಕೆ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ, ಭಕ್ತರ ಓಡಾಟ ಸುಗಮ ಮಾಡಲು ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ, ನೆರೆಯ ಜಿಲ್ಲೆಗಳಿಂದ ಬರುವ ಎಲ್ಲಾ ನಾಲ್ಕು ಚಕ್ರಗಳ ವಾಹನಗಳನ್ನು ಗಡಿಯಲ್ಲೇ ತಡೆಯುವ ಮೂಲಕ ಪ್ರಯಾಗ್‌ರಾಜ್ ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಜತೆಗೆ ಮೇಳದಿಂದ ಮರಳುವವರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಇದರ ಜೊತೆಗೆ ಹಿಂದಿನ ಕುಂಭಮೇಳದ ವೇಳೆ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಐಎಎಸ್ ಅಧಿಕಾರಿಗಳಾದ ಆಶಿಶ್ ಗೋಯಲ್ ಹಾಗೂ ಭಾನು ಗೋಸ್ವಾಮಿ ಅವರನ್ನು ಮೇಲ್ವಿಚಾರಣೆಗೆ ನೇಮಿಸಲಾಗಿದೆ. ಜೊತೆಗೆ, ಕಾರ್ಯದರ್ಶಿ ಶ್ರೇಣಿಯ 5 ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ.
ನಿನ್ನೆಯೂ ಭಾರೀ ಜನಸಂದಣಿ:
ಬುಧವಾರದ ಕಾಲ್ತುಳಿತದ ಘಟನೆಯ ಹೊರತಾಗಿಯೂ ಕುಂಭಮೇಳಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ. ಗುರುವಾರ ಕೂಡಾ 2 ಕೋಟಿಗೂ ಹೆಚ್ಚಿನ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಇದರೊಂದಿಗೆ ಕಳೆದ 2 ವಾರದ ಅವಧಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರ ಸಂಖ್ಯೆ 30 ಕೋಟಿ ತಲುಪಿದೆ. ಭಕ್ತರು ಮೈಕೊರೆವ ಚಳಿಯನ್ನೂ ಲೆಕ್ಕಿಸದೇ, ಹತ್ತಾರು ಕಿ.ಮೀ ನಡೆದೇ ಕುಂಭಮೇಳ ನಡೆವ ಸ್ಥಳಕ್ಕೆ ಆಗಮಿಸಿ ಪುಣ್ಯಸ್ನಾನದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಪವಿತ್ರ ಸ್ನಾನ:
ಕುಂಭಮೇಳದ 1 ತಿಂಗಳ ಅವಧಿಯಲ್ಲಿ ಒಟ್ಟು 5 ದಿನಗಳನ್ನು ವಿಶೇಷವಾಗಿ ಪುಣ್ನಸ್ನಾನಕ್ಕೆ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಈ ಪೈಕಿ ಈಗಾಗಲೇ 2 ಪುಣ್ಯಸ್ನಾನ ಮುಗಿದಿದ್ದು ಫೆ.3, ಫೆ.12 ಮತ್ತು ಫೆ.26ರಂದು ನಡೆಯಲಿರುವ ಬಸಂತ್ ಪಂಚಮಿ, ಮಾಘ ಪೂರ್ಣಿಮೆ ಮತ್ತ ಮಹಾಶಿವರಾತ್ರಿಯ ದಿನದಂದು ಉಳಿದ ಸ್ನಾನ ನಡೆಯಲಿದೆ. ಈ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
- ಕುಂಭನಗರಿಗೆ ವಾಹನ ನಿಷೇಧ, ವಿಐಪಿ ಪಾಸ್ ರದ್ದು- ಮೇಳದಿಂದ ಮರಳುವವರಿಗೆ ಹೆಚ್ಚುವರಿ ಬಸ್
ಖರ್ಗೆ ಗಂಗಾಪೂಜೆ ಫೋಟೋ ವೈರಲ್!
ಗಂಗಾಸ್ನಾನ ಕುರಿತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ- ಪ್ರತಿಪಕ್ಷಗಳು, ಇದೀಗ ಖರ್ಗೆ ಅವರು ಭೀಮಾನದಿಯಲ್ಲಿ ಗಂಗಾಪೂಜೆ ಮಾಡುತ್ತಿರೋ ಫೋಟೋ ವೈರಲ್ ಮಾಡಿವೆ.