ಮತ್ತೊಂದು ಘೋರ ದುರಂತ : ದಕ್ಷಿಣ ಕೊರಿಯಾದಲ್ಲಿ ‘ಜೆಜು ಏರ್‌’ ಸಂಸ್ಥೆಯ ಭೀಕರ ವಿಮಾನ ದುರಂತ : 179 ಬಲಿ

| Published : Dec 30 2024, 01:01 AM IST / Updated: Dec 30 2024, 04:29 AM IST

ಸಾರಾಂಶ

38 ಜನರ ಬಲಿಪಡೆದ ಅಜರ್ಬೈಜಾನ್‌ ವಿಮಾನ ದುರಂತ ಮಾಸುವ ಮುನ್ನವೇ ಮತ್ತೊಂದು ಘೋರ ದುರಂತ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಸೋಲ್‌ (ದಕ್ಷಿಣ ಕೊರಿಯಾ): 38 ಜನರ ಬಲಿಪಡೆದ ಅಜರ್ಬೈಜಾನ್‌ ವಿಮಾನ ದುರಂತ ಮಾಸುವ ಮುನ್ನವೇ ಮತ್ತೊಂದು ಘೋರ ದುರಂತ ಭಾನುವಾರ ಬೆಳಗ್ಗೆ ಸಂಭವಿಸಿದೆ. ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಜೆಜು ಏರ್‌’ ಸಂಸ್ಥೆಯ ವಿಮಾನವು ಹಕ್ಕಿ ಡಿಕ್ಕಿ ಹಾಗೂ ಲ್ಯಾಂಡಿಂಗ್ ವೈಫಲ್ಯದ ಕಾರಣ ಅಪಘಾತಕ್ಕೀಡಾಗಿದೆ. 

ಘಟನೆಯಲ್ಲಿ 179 ಮಂದಿ ದಾರುಣ ಅಂತ್ಯ ಕಂಡಿದ್ದಾರೆ. ಇಬ್ಬರು ಪವಾಡ ಸದೃಶವಾಗಿ ಜೀವ ಉಳಿಸಿಕೊಂಡಿದ್ದಾರೆ. 

ಜೆಜು ಏರ್‌ ವಿಮಾನವು ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಿಂದ ಮುವಾನ್ ಏರ್‌ಪೋರ್ಟ್‌ಗೆ ಆಗಮಿಸಿತು. ಈ ವಿಮಾನದಲ್ಲಿ 175 ಮಂದಿ ಪ್ರಯಾಣಿಕರು, 6 ಮಂದಿ ಸಿಬ್ಬಂದಿ ಸೇರಿ ಒಟ್ಟು 181 ಮಂದಿ ವಿಮಾನದಲ್ಲಿದ್ದರು. ಹಕ್ಕಿ ಡಿಕ್ಕಿ ಆದ ಕಾರಣ, ಲ್ಯಾಂಡಿಂಗ್‌ ಗೇರ್‌ ವಿಫಲಗೊಂಡು ರನ್‌ವೇನಲ್ಲಿ ವಿಮಾನ ಸಹಜ ಲ್ಯಾಂಡಿಂಗ್‌ ಆಗದೇ ‘ಬೆಲ್ಲಿ ಲ್ಯಾಂಡಿಂಗ್‌’ ಆಗಿದೆ ಹಾಗೂ ವೇಗವಾಗಿ ಕಾಂಕ್ರೀಟ್‌ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಮಾನ ನೋಡ ನೋಡುತ್ತಿದ್ದಂತೆ ತಕ್ಷಣವೇ ಹೊತ್ತಿ ಉರಿದಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. 32 ಅಗ್ನಿಶಾಮಕ ವಾಹನಗಳು, ಹಲವಾರು ಹೆಲಿಕಾಪ್ಟರ್‌ಗಳು, 1560 ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಸೈನಿಕರು ಮತ್ತು ಇತರ ಅಧಿಕಾರಿಗಳು ಸಹ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಆದರೆ ಈ ದುರ್ಘಟನೆಯಲ್ಲಿ 181 ಮಂದಿ ಪೈಕಿ 179 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಘಟನೆ ಹೇಗಾಯ್ತು?:ಬೋಯಿಂಗ್ 737-800 ಸಂಖ್ಯೆಯ ವಿಮಾನವು ಲ್ಯಾಂಡಿಂಗ್‌ ಆಗಲು ಇನ್ನೇನು ಕೆಲವೇ ನಿಮಿಷ ಉಳಿದಿತ್ತು. ಆಗ ಕಂಟ್ರೋಲ್‌ ಟವರ್‌ನಿಂದ (ಎಟಿಸಿಯಿಂದ), ‘ಹಕ್ಕಿ ಡಿಕ್ಕಿ ಆಗಬಹುದು. ಪರ್ಯಾಯ ಸ್ಥಳದಲ್ಲಿ ವಿಮಾನ ಇಳಿಸಿ’ ಎಂಬ ಸಂದೇಶ ಹೋಗಿದೆ. ಇದರ ಬೆನ್ನಲ್ಲೇ ಹಕ್ಕಿ ಡಿಕ್ಕಿ ಆಗಿರಬಹುದು ಎನ್ನಲಾಗಿದ್ದು, ಪೈಲಟ್ ‘ಅಪಾಯದ ಸಂದೇಶ’ವನ್ನು ಕಂಟ್ರೋಲ್‌ ಟವರ್‌ಗೆ ಕಳಿಸಿದ್ದಾನೆ. 

ಇದಾದ ಮೂರೇ ನಿಮಿಷದಲ್ಲಿ ವಿಮಾನವನ್ನು ಒಮ್ಮೆ ಲ್ಯಾಂಡಿಂಗ್‌ಗೆ ಯತ್ನಿಸಿದ್ದಾನೆ. ಆದರೆ ಹಕ್ಕಿ ಡಿಕ್ಕಿ ಆಗಿದ್ದರಿಂದ ಲ್ಯಾಂಡಿಂಗ್ ಗೇರ್ ಕೈಕೊಟ್ಟಿದ್ದು, ವಿಮಾನದ ಚಕ್ರ ತೆರೆದುಕೊಳ್ಳದೇ ಲ್ಯಾಂಡಿಂಗ್‌ ಯತ್ನ ವಿಫಲವಾಗಿದೆ. ಬಳಿಕ 2ನೇ ಯತ್ನದಲ್ಲಿ ಬೆಲ್ಲಿ ಲ್ಯಾಂಡಿಂಗ್‌ ಮಾಡಿದ್ದಾನೆ. ಆಗ ಅದು ರಭಸದಿಂದ ಲ್ಯಾಂಡ್‌ ಆಗಿ ರನ್‌ವೇಯಿಂದ ಸ್ಕಿಡ್‌ ಆಗಿ ವೇಗವಾಗಿ ಕಾಂಕ್ರೀಟ್‌ ಗೋಡೆಗೆ ಡಿಕ್ಕಿ ಹೊಡೆದಿದೆ.

ರಭಸದ ಲ್ಯಾಂಡಿಂಗ್‌ ಹಾಗೂ ಗೋಡೆಗೆ ಅಪ್ಪಳಿಸಿದ ಪರಿಣಾಮ ದೊಡ್ಡದಾಗಿ ಬೆಂಕಿ ಹತ್ತಿಕೊಂಡು ವಿಮಾನ ಸುಟ್ಟು ಕರಕಲಾಗಿದೆ. ವಿಮಾನದ ಬಾಲದ ಅವಶೇಷ ಮಾತ್ರ ಉಳಿದಿದೆ. ಕಡೆ ಕ್ಷಣದಲ್ಲಿ ಬ್ರೇಕಿಂಗ್ ವೈಫಲ್ಯದಿಂದ ದುರ್ಘಟನೆ ಸಂಭವಿಸುವ ಸಾಧ್ಯತೆ ಬಗ್ಗೆಯೂ ಚರ್ಚೆಯಾಗುತ್ತಿದೆ.

ಘಟನೆ ಬಗ್ಗೆ ಜೆಜು ಜೆಟ್‌ ಕ್ಷಮೆಯಾಚನೆ

ವಿಮಾನ ದುರಂತದ ಬೆನ್ನಲ್ಲೇ ಘಟನೆಗೆ ಜೆಜು ಏರ್‌ ಸಿಇಒ ಕಿಮ್‌ ಎ ಬೇ ಕ್ಷಮೆಯಾಚಿಸಿದ್ದಾರೆ. ‘ದುರಂತಕ್ಕೆ ಏನೇ ಕಾರಣ ಇರಲಿ.. ಇಡೀ ಘಟನೆಯ ಹೊಣೆ ನಾನು ಹೊರುವೆ’ ಎಂದಿದ್ದಾರೆ.

ಇದೇ ವೇಳೆ. ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ. ‘ಮುವಾನ್‌ ದುರಂತದಲ್ಲಿ ಸಂಕಷ್ಟಕ್ಕೀಡಾದ ಪ್ರತಿಯೊಬ್ಬರಲ್ಲಿಯೂ ಕ್ಷಮೆಯಾಚಿಸುತ್ತೇವೆ. ಅಪಘಾತದ ನಂತರದ ಪರಿಣಾಮಗಳನ್ನು ಬಗೆಹರಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತೇವೆ’ ಎಂದಿದೆ. 

ಇನ್ನು ಘಟನೆ ಬಳಿಕ ಮುಯಾನ್ ವಿಮಾನ ನಿಲ್ದಾಣದ ರನ್‌ ವೇಯನ್ನು ಜ.1ರ ಬಂದ್‌ ಮಾಡಿ ಸರ್ಕಾರ ಆದೇಶಿಸಿದೆ.ಕಂಪನಿಯು ವಿಮಾನದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ ಎಂದಿದ್ದು, ಸರ್ಕಾರದ ತನಿಖೆಯ ಫಲಿತಾಂಶಗಳನ್ನು ಕಾಯುತ್ತಿದ್ದೇವೆ ಎಂದಿದೆ. ಇನ್ನು ವಿಮಾನ ತಯಾರಿಸಿದ್ದ ಬೋಯಿಂಗ್ ಕೂಡ ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದು, ‘ಜೆಜು ಏರ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ. ಸಮಸ್ಯೆಯನ್ನು ಎದುರಿಸಲು ಕಂಪನಿಯನ್ನು ಬೆಂಬಲಿಸಲು ಸಿದ್ಧವಾಗಿದ್ದೇವೆ’ ಎಂದಿದೆ.

ದುರಂತಕ್ಕೆ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್ಟರ್ನ್ ಶಿನಾವತ್ರಾ ಸಂತಾಪ ಸೂಚಿಸಿದ್ದಾರೆ.

ಇದು ನನ್ನ ಕೊನೆಯ ಮಾತು: ಪ್ರಯಾಣಿಕನ ಕಡೇ ಸಂದೇಶ

ದಕ್ಷಿಣ ಕೊರಿಯಾದಲ್ಲಿ ದುರಂತಕ್ಕೀಡಾದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಸಾವಿನ ಮುನ್ಸೂಚನೆ ಮೊದಲೇ ಲಭಿಸಿತ್ತು ಎಂಬ ಬೆಚ್ಚಿಬೀಳಿಸುವ ವಿಷಯ ಬೆಳಕಿಗೆ ಬಂದಿದೆ. ವಿಮಾನಕ್ಕೆ ಹಕ್ಕಿ ಡಿಕ್ಕಿ ಆಗಬಹುದು ಎಂಬ ಸಂದೇಶವನ್ನು ಕಂಟ್ರೋಲ್‌ ಸೆಂಟರ್‌ (ಎಟಿಸಿ) ಮೊದಲೇ ಕಳಿಸಿತ್ತು. ಇದರ ಬೆನ್ನಲ್ಲೇ ಹಕ್ಕಿ ಡಿಕ್ಕಿ ಆಗಿದೆ. 

ಇದು ವಿಮಾನದಲ್ಲಿದ್ದ ಪ್ರಯಾಣಿಕರ ಅನುಭವಕ್ಕೂ ಬಂದಿದೆ.ಈ ವೇಳೆ ದುರಂತದಲ್ಲಿ ಸಾವನ್ನಪ್ಪಿದ್ದ ಪ್ರಯಾಣಿಕರ ಪೈಕಿ ಓರ್ವನು ತನ್ನ ಸಂಬಂಧಿಕರಿಗೆ, ‘ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿಯಾಗಿದೆ’ ಎಂದು ಮೊಬೈಲ್‌ ಸಂದೇಶ ಕಳಿಸಿದ್ದಾನೆ. ಇದರ ಬೆನ್ನಲ್ಲೇ ವಿಮಾನ ಅಪಘಾತಕ್ಕೆ ಈಡಾಗಬಹುದು ಎಂಬ ಮುನ್ಸೂಚನೆ ಅರಿತು, ‘ಇದು ನನ್ನ ಕೊನೆಯ ಮಾತಾಗಬಹುದು’ ಎಂದೂ ಸಂದೇಶ ರವಾನಿಸಿದ್ದಾನೆ. ಇದಾದ ಕೆಲವೇ ಕ್ಷಣದಲ್ಲಿ ವಿಮಾನ ರಭಸದ ಲ್ಯಾಂಡಿಂಗ್‌ ಆಗಿ ಬೆಂಕಿಗಾಹುತಿಯಾಗಿದೆ.

ಹಕ್ಕಿ ಡಿಕ್ಕಿ ಬಗ್ಗೆ ಮೊದಲೇ ಬಂದಿತ್ತು ಎಚ್ಚರಿಕೆ  ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 179 ಮಂದಿ ಬಲಿ ಪಡೆದ ದುರಂತಕ್ಕೆ ಸಂಬಂಧಿಸಿದಂತೆ ಹಕ್ಕಿ ಡಿಕ್ಕಿ ಹೊಡೆಯಬಹುದು ಎನ್ನುವ ಬಗ್ಗೆ ಕಂಟ್ರೋಲ್ ಟವರ್‌ ಮೊದಲೇ ಎಚ್ಚರಿಕೆಯನ್ನು ನೀಡಿತ್ತು ಎನ್ನುವ ವಿಚಾರ ಹೊರ ಬಿದ್ದಿದೆ.ವಿಮಾನ ಲ್ಯಾಂಡ್‌ ಆಗುವ 5 ನಿಮಿಷ ಮೊದಲು ಹಕ್ಕಿ ಡಿಕ್ಕಿ ಹೊಡೆಯಬಹುದು ಎಂದು ಕಂಟ್ರೋಲ್‌ ಟವರ್‌ನಿಂದ ಸಂದೇಶ ಹೋಗಿತ್ತು. ಬಳಿಕ ಇದಾದ 3 ನಿಮಿಷದಲ್ಲಿ ವಿಮಾನದ ಲ್ಯಾಂಡಿಂಗ್‌ ಗೇರ್‌ ವೈಫಲ್ಯವಾಗಿ ರಭಸದ ಭೂಸ್ಪರ್ಶವಾಗಿದೆ. ಈ ನಡುವೆ ರನ್‌ ವೇನಲ್ಲಿ ಲ್ಯಾಂಡಿಂಗ್ ವೇಳೆ ಸ್ಕಿಡ್‌ ಆಗುವ ಮೊದಲು ಎಂಜಿನ್‌ಗಳಿಂದ ಹೊಗೆ ಬರುತ್ತಿರುವುದನ್ನೂ ಕಾಣಬಹುದಾಗಿದೆ

ವಿಮಾನ ಅಪಘಾತಕ್ಕೂ ಮುನ್ನ ಹಕ್ಕಿ ಡಿಕ್ಕಿ ದೃಶ್ಯ ಸೆರೆ  179 ಜನರನ್ನು ಬಲಿ ಪಡೆದ ಸಿಯೋಲ್ ವಿಮಾನ ದುರಂತಕ್ಕೆ ಹಕ್ಕಿ ಡಿಕ್ಕಿ ಕಾರಣ ಎನ್ನಲಾಗುತ್ತಿದ್ದು, ವಿಮಾನ ಪತನಕ್ಕೂ ಮುನ್ನ ಪಕ್ಷಿ ಡಿಕ್ಕಿ ಹೊಡೆದ ದೃಶ್ಯ ಸೆರೆಯಾಗಿದೆ.ಮೂಲಗಳ ಪ್ರಕಾರ, ಬೋಯಿಂಗ್ 737-800 ಜೆಟ್‌ನ ಲ್ಯಾಂಡಿಂಗ್ ಗೇರ್‌ನ ವೈಫಲ್ಯಕ್ಕೆ ಹಕ್ಕಿ ಡಿಕ್ಕಿ ಕಾರಣ ಎಂದು ಶಂಕಿಸಲಾಗಿದೆ. ಅಪಘಾತದ ದೃಶ್ಯಗಳಲ್ಲಿ ಅವಳಿ- ಎಂಜಿನ್ ವಿಮಾನವು ಸರಿಯಾದ ಲ್ಯಾಂಡಿಂಗ್ ಗೇರ್‌ ಇಲ್ಲದೆ ಇಳಿಯುವುದು, ವಿಮಾನ ನಿಲ್ದಾಣದ ಹೊರ ಅಂಚಿನಲ್ಲಿರುವ ಗೋಡೆಗೆ ಡಿಕ್ಕಿಯಾಗಿ ಹೊತ್ತಿ ಉರಿಯುತ್ತಿರುವುದು ಸೆರೆಯಾಗಿದೆ.

ವಿಶ್ವದ ಅತಿ ಡೆಡ್ಲಿ ವಿಮಾನ ಅವಘಡಗಳು

1. ನೇಪಾಳ ವಿಮಾನ ದುರಂತ:2023 ಜ.15ರಂದು ನೇಪಾಳದ ಪೋಖ್ರಾದಲ್ಲಿ ಯೇತಿ ಏರ್‌ಲೈನ್ಸ್‌ ವಿಮಾನ ದುರಂತ: 72 ಸಾವು

---2. ಮಲೇಷ್ಯಾ ಏರ್‌ಲೈನ್ಸ್ ವಿಮಾನ 17 ದುರಂತ:2014 ಜು.17ರಂದು ಉಕ್ರೇನ್‌ನಲ್ಲಿ ಮಲೇಷ್ಯಾ ಏರ್‌ಲೈನ್ಸ್‌ ವಿಮಾನ ದುರಂತ: 298 ಸಾವು

---3. ಏರಿಂಡಿಯಾ ವಿಮಾನ 182 ದುರಂತ1985 ಜೂನ್‌. 23ರಂದು ಕೆನಡಾದಿಂದ ಭಾರತಕ್ಕೆ ಬರುತ್ತಿದ್ದ ಏರಿಂಡಿಯಾ ಐರ್ಲೆಂಡ್‌ನಲ್ಲಿ ಪತನ: 329 ಸಾವು

---4.. ಏರ್ ಫ್ರಾನ್ಸ್‌ ವಿಮಾನ 447 ದುರಂತ2009 ಜೂನ್‌ 1 ರಂದು ಬ್ರೆಜಿಲ್‌ನಿಂದ ಪ್ಯಾರಿಸ್‌ ತೆರಳುತ್ತಿದ್ದ ವಿಮಾನ ಅಟ್ಲಾಂಟಿಕ್ ಸಾಗರದಲ್ಲಿ ಕಣ್ಮರೆ: 228 ಸಾವು

---5.ಟರ್ಕೀಶ್‌ ಏರ್‌ಲೈನ್ಸ್‌ ವಿಮಾನ 981 ದುರಂತ1974 ಮಾರ್ಚ್‌ 3 ರಂದು ಫ್ರಾನ್ಸ್‌ನಲ್ಲಿ ವಿಮಾನ ಪತನ: 346 ಸಾವು

----6. ಜಪಾನ್ ಏರ್‌ಲೈನ್ಸ್‌ ವಿಮಾನ 123 ದುರಂತ1985 ಆಗಸ್ಟ್‌ 12ರಂದು ಜಪಾನಿನ ಟೋಕಿಯೋದಿಂದ ಒಸಾಕಾಗೆ ತೆರಳುತ್ತಿದ್ದ ವಿಮಾನ ಪತನ: 520 ಸಾವು 

7. ಚರ್ಖಿ ದಾದ್ರಿ ವಿಮಾನ ದುರಂತ1996 ನವೆಂಬರ್‌ 12ರಂದು ಭಾರತದ ಚರ್ಖಿ ದಾದ್ರಿಯಲ್ಲಿ ಸೌದಿ ಅರೇಬಿಯಾ ಏರ್‌ಲೈನ್ಸ್‌ ಪತನ: 349 ಸಾವು

8. ಅಮೆರಿಕನ್ ಏರ್‌ಲೈನ್ಸ್‌ 171 ದುರಂತ1979 ಮೇ 25ರಂದು ಶಿಕಾಗೋದಲ್ಲಿ ಅಮೆರಿಕನ್ ಏರ್‌ಲೈನ್ಸ್‌ ವಿಮಾನ ಅಪಘಾತ: 273 ಸಾವು

------9. ಮಲೇಷ್ಯಾ ಏರ್‌ಲೈನ್ಸ್‌ ವಿಮಾನ 1 ಪತನ2014 ಮಾರ್ಚ್‌ 8, ಕೌಲಾಲಂಪುರದಿಂದ ಬೀಜಿಂಗ್‌ಗೆ ತೆರಳುತ್ತಿದ್ದ ವಿಮಾನ ಪತನ: 239 ಸಾವು------10. ದಕ್ಷಿಣ ಕೊರಿಯಾ ವಿಮಾನ ದುರಂತ1997ರಲ್ಲಿ ಘಟನೆ. ಕೊರಿಯನ್ ಏರ್‌ ಜೆಟ್‌ ಪಶ್ಚಿಮ ಪೆಸಿಫಿಕ್‌ನಲ್ಲಿ ಪತನ:229 ಸಾವು

------11. ಮಂಗಳೂರು ವಿಮಾನ ದುರಂತ2010 ಮಾರ್ಚ್‌ 22. ದುಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ವಿಮಾನ ಪತನ: 158 ಸಾವು