ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ ಮುಖ್ಯ ಗುಮ್ಮಟದ ಬಳಿ ಬೆಳೆದ ಗಿಡ : ನಿರ್ವಹಣೆ ಆತಂಕ

| Published : Sep 20 2024, 01:32 AM IST / Updated: Sep 20 2024, 05:39 AM IST

ಸಾರಾಂಶ

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬ ವರದಿ ಬೆನ್ನಲ್ಲೆ ಅದರ ಗೋಡೆಗಳ ಮೇಲೆ ಗಿಡ ಬೆಳೆದಿರುವ ಸುದ್ದಿ ಈಗ ಹೊರಬಿದ್ದಿದೆ.

ಆಗ್ರಾ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬ ವರದಿ ಬೆನ್ನಲ್ಲೆ ಅದರ ಗೋಡೆಗಳ ಮೇಲೆ ಗಿಡ ಬೆಳೆದಿರುವ ಸುದ್ದಿ ಈಗ ಹೊರಬಿದ್ದಿದೆ. 

ಇದು ತಾಜ್‌ಮಹಲ್‌ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ತಾಜ್‌ ಮಹಲ್‌ನ ಗುಮ್ಮಟದಿಂದ ನೀರು ಸೋರಿಕೆಯಾಗಿತ್ತು. ಮಾಳಿಗೆಯ ಮೇಲೆ ನೀರು ನಿಂತಿರುವುದನ್ನು ಅಧಿಕಾರಿಗಳು ಡ್ರೋನ್‌ ಮೂಲಕ ಪತ್ತೆ ಹಚ್ಚಿದ್ದರು. ಇದೇ ತೇವಾಂಶದಿಂದ ಇದೀಗ ಅಮೃತಶಿಲೆಯ ಗೋಡೆಗಳ ಮೇಲೆ ಗಿಡ ಬೆಳೆದಿದ್ದು, ಗಾಳಿಗೆ ಎಲೆಗಳು ಅಲುಗಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಸಿಂಧೂ ನದಿ ಒಪ್ಪಂದ ಬದಲಿಗೆ ಪಾಕ್‌ ನಕಾರ 

ಇಸ್ಲಾಮಾಬಾದ್‌: ಸಿಂಧೂ ನದಿ ಜಲ ಒಪ್ಪಂದದಲ್ಲಿ ಬದಲಾವಣೆ ಮಾಡಿಕೊಳ್ಳಲು ಭಾರತ ಸರ್ಕಾರ ನೀಡಿದ್ದ ನೋಟಿಸ್‌ಗೆ ಪಾಕಿಸ್ತಾನ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಭಾರತ ಜಲ ಒಪ್ಪಂದದಲ್ಲಿರುವ ನಿಬಂಧನೆಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದೆ. ಈ ಬಗ್ಗೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಮುಮ್ತಾಜ್‌ ಝಹ್ರಾ ಬಲೂಚ್‌,‘ಪಾಕಿಸ್ತಾನವು ಸಿಂಧೂ ನದಿ ಒಪ್ಪಂದವನ್ನು ಪ್ರಮುಖವೆಂದು ಪರಿಗಣಿಸುತ್ತದೆ. ಜೊತೆಗೆ ಈ ಒಪ್ಪಂದಕ್ಕೆ ಭಾರತ ಸರ್ಕಾರವು ಬದ್ಧವಾಗಿರಬೇಕು ಎಂದು ಪಾಕಿಸ್ತಾನ ನಿರೀಕ್ಷಿಸುತ್ತದೆ. ಉಭಯ ದೇಶಗಳು ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಲ ಆಯುಕ್ತರ ಕಾರ್ಯವಿಧಾನವನ್ನು ಹೊಂದಿದೆ. ಒಪ್ಪಂದ ಸಂಬಂಧಿತ ಎಲ್ಲಾ ವಿಷಯಗಳನ್ನು ಅದರ ಸಮ್ಮುಖದಲ್ಲಿ ಚರ್ಚಿಸಬೇಕು. ಒಪ್ಪಂದದ ಬದಲಾವಣೆ ಕುರಿತೂ ಸಹ ಅಲ್ಲೇ ಮಾತುಕತೆ ನಡೆಯಬೇಕು ಎಂದು ಹೇಳಿದ್ದಾರೆ.

ಗಣೇಶ ಚತುರ್ಥಿ ವೇಳೆ ಧ್ವನಿವರ್ಧಕ ಬಳಕೆ ತಪ್ಪಾದರೆ, ಈದ್‌ನಲ್ಲೂ ತಪ್ಪು

ಮುಂಬೈ: ಗಣೇಶ ಚತುರ್ಥಿಯಲ್ಲಿ ಡಿಜೆ ಮತ್ತು ಧ್ವನಿವರ್ಧಕ ಬಳಕೆ ಹಾನಿಕಾರಕವಾಗಿದ್ದರೆ, ಈದ್‌ ಮೆರವಣಿಗೆಯಲ್ಲಿ ಬಳಸುವುದು ಕೂಡಾ ಹಾನಿಕಾರಕವೇ ಎಂದು ಬಾಂಬೆ ಹೈಕೋರ್ಟ್‌ ತಿಳಿಸಿದೆ.

ಈದ್ ಮೆರವಣಿಗೆಯಲ್ಲಿ ಡಿಜೆ ಸೌಂಡ್‌ ಮತ್ತು ಲೇಸರ್ ಲೈಟ್‌ಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.ಕೆಲ ದಿನಗಳ ಹಿಂದೆ ಗಣೇಶ ಹಬ್ಬಕ್ಕೆ ಮುನ್ನ ಕೂಡಾ ಹೈಕೋರ್ಟ್‌ ಇದೇ ರೀತಿ ಆದೇಶ ಹೊರಡಿಸಿತ್ತು. ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕ ಬಳಸದಂತೆ ಸೂಚಿಸಿತ್ತು. ಅದನ್ನು ಉದಾಹರಿಸಿ ಹೈಕೋರ್ಟ್‌ ಈ ಮಾತುಗಳನ್ನು ಆಡಿದೆ.

ಹಳಿ ಮೇಲೆ ಕಬ್ಬಿಣದ ಕಂಬ ಇಟ್ಟು ದುಷ್ಕೃತ್ಯಕ್ಕೆ ಯತ್ನ!

ನವದೆಹಲಿ: ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಇಟ್ಟು ದುಷ್ಕೃತ್ಯಕ್ಕೆ ಯತ್ನಿಸಿದ ಘಟನೆಯೊಂದು ಉತ್ತರಾಖಂಡದ ರುದ್ರಪುರ ಬಳಿ ನಡೆದಿದೆ. ಅದೃಷ್ಟವಶಾತ್‌ ರೈಲಿನ ಚಾಲಕ ಕಂಬವನ್ನು ಗುರುತಿಸಿ ತುರ್ತು ಬ್ರೇಕ್‌ ಹಾಕಿದ ಕಾರಣ ಅನಾಹುತವೊಂದು ತಪ್ಪಿದೆ. ರುದ್ರಪುರದ ಸಮೀಪ 10.18ರ ಸುಮಾರಿನಲ್ಲಿ ರೈಲು ಚಾಲಕ ಹಳಿಯ ಮೇಲೆ 6 ಮೀಟರ್‌ ಉದ್ದದ ಕಬ್ಬಿಣದ ಕಂಬ ನೋಡಿದ್ದಾರೆ. ನಂತರ ತುರ್ತು ಬ್ರೇಕ್‌ ಹಾಕಿ ರೈಲನ್ನು ನಿಲ್ಲಿಸಿ, ರುದ್ರಪುರದ ಸ್ಟೇಷನ್‌ ಮಾಸ್ಟರ್‌ಗೆ ಸುದ್ದಿ ತಿಳಿಸಿದ್ದಾರೆ. ಇತ್ತೀಚೆಗೆ ಕಾನ್ಪುರದಲ್ಲಿ ರೈಲ್ವೆ ಹಳಿ ಮೇಲೆ ಸಿಲಿಂಡರ್‌, ಸಿಮೆಂಟ್‌ ಬ್ರಿಕ್ಸ್‌ ಪತ್ತೆಯಾಗಿದ್ದವು.

ರೇಟ್‌ ವಿಚಾರ ವಾಗ್ವಾದ ಸುತ್ತಿಗೆಯಿಂದ ಹೊಡೆದು ಲೈಂಗಿಕ ಕಾರ್‍ಯಕರ್ತೆ ಹತ್ಯೆ

ಚೆನ್ನೈ: ಲೈಂಗಿಕ ಸೇವೆ ನೀಡಿದ್ದಕ್ಕೆ ಹೆಚ್ಚಿನ ಹಣ ಕೇಳಿದ ಕಾರಣ ಯುವಕನೋರ್ವ ಲೈಂಗಿಕ ಕಾರ್ಯಕರ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದೆ. ಮಣಿಕಂಠನ್‌ ಎಂಬ 23 ವರ್ಷದ ಯುವಕ ಮನೆಯಲ್ಲಿ ಯಾರು ಇಲ್ಲದ ವೇಳೆ ಲೈಂಗಿಕ ಕಾರ್ಯಕರ್ತೆಯನ್ನು ಮನೆಗೆ ಕರೆಸಿದ್ದಾನೆ. 

ಇಬ್ಬರೂ ಸೆಕ್ಸ್‌ ನಡೆಸಿದ ಬಳಿಕ ಇಬ್ಬರ ನಡುವೆ ಬೆಲೆ ವಿಚಾರವಾಗಿ ಏರುದನಿಯಲ್ಲಿ ವಾಗ್ವಾದ ಶುರುವಾಗಿದೆ. ಇದು ತೀವ್ರ ಸ್ವರೂಪಕ್ಕೆ ತಿರುಗಿದಾಗ ಮಣಿಕಂಠನ್‌ ಸುತ್ತಿಗೆಯಿಂದ ಮಹಿಳೆ ತಲೆಗೆ ಹೊಡೆದಿದ್ದಾನೆ. ಸುತ್ತಿಗೆ ಏಟಿಕೆ ಮಹಿಳೆ ಮೃತಪಟ್ಟಿದ್ದಾಳೆ. ಬಳಿಕ ಆಕೆಯ ದೇಹವನ್ನು ದೊಡ್ಡ ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಬಿಸಾಡಿದ್ದಾನೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.