ಸಾರಾಂಶ
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳ ಹಾಗೂ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗ ರಚಿಸಲು ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳ ಹಾಗೂ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗ ರಚಿಸಲು ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ‘ಪ್ರಧಾನಿ ನರೇಂದ್ರ ಮೋದಿಯವರು 8ನೇ ವೇತನ ಆಯೋಗ ರಚನೆಗೆ ಸಮ್ಮತಿಸಿದ್ದಾರೆ. ಕೇಂದ್ರ, ರಾಜ್ಯ ಹಾಗೂ ಸಂಬಂಧಿಸಿದವರೊಂದಿಗೆ ಸಮಾಲೋಚನೆ ನಡೆಸಿ, 7ನೇ ಆಯೋಗದ ಅವಧಿ ಮುಕ್ತಾಯಕ್ಕೂ ಮುನ್ನ ಹೊಸ ಆಯೋಗ ತನ್ನ ವರದಿ ಸಲ್ಲಿಸಲಿದೆ’ ಎಂದರು.2014ರಲ್ಲಿ ರಚನೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು 2016ರ ಜ.1ರಂದು ಅನುಷ್ಠಾನಕ್ಕೆ ತರಲಾಗಿದ್ದು, ಇದು 2026ಕ್ಕೆ ಅಂತ್ಯವಾಗಲಿದೆ.
ಪ್ರಸ್ತುತ 49 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ 65 ಲಕ್ಷ ಪಿಂಚಣಿದಾರರು ಇದ್ದಾರೆ. ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಗಳು ಸಿಬ್ಬಂದಿಗಳ ವೇತನ ಹೆಚ್ಚಳ ಮತ್ತು ನಿವೃತ್ತರ ಪಿಂಚಣಿ ಹೆಚ್ಚಳದ ನಿರ್ಧಾರ ಕೈಗೊಳ್ಳುತ್ತವೆ. ಈ ಹಿಂದೆ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯವೇ ನೂತನ ಸಿಬ್ಬಂದಿಗಳ ಕನಿಷ್ಠ ವೇತನವನ್ನು 7000 ರು.ನಿಂದ 18000 ರು.ಗೆ ಕೇಂದ್ರ ಸರ್ಕಾರ ಹೆಚ್ಚಿಸಿತ್ತು. ಗರಿಷ್ಠ ವೇತನದ ಮಿತಿಯನ್ನು 2.5 ಲಕ್ಷ ರು.ಗೆ ನಿಗದಿ ಮಾಡಿತ್ತು.