ಸಾರಾಂಶ
ಮುಂಬೈ: ನಾಗರಿಕ ಸೇವೆಗಳಿಗೆ ಯುಪಿಎಸ್‌ಸಿ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬದಲು ಬಿಸಿನೆಸ್ ಸ್ಕೂಲ್‌ಗಳಿಂದ ಆಯ್ಕೆ ಮಾಡಬಹುದು ಎಂದು ಇನ್ಫೋಸಿಸ್ ಸಹ-ಸ್ಥಾಪಕ ನಾರಾಯಣ ಮೂರ್ತಿ ಪ್ರದಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಸಿಎನ್‌ಬಿಸಿ ಟಿವಿ18 ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೂರ್ತಿ, ‘ಹೀಗೆ ಮಾಡುವುದರಿಂದ ದೇಶ ಆಡಳಿತಾತ್ಮಕ ಮನಸ್ಥಿತಿಯಿಂದ ನಿರ್ವಹಣೆ ಮಾದರಿಗೆ ಬದಲಾಗಬಹುದು. ಬಿಸಿನೆಸ್ ಸ್ಕೂಲ್‌ಗಳಿಂದ ಆಯ್ಕೆಯಾದವರಿಗೆ ಮಸ್ಸೂರಿಯಲ್ಲಿರುವ ಅಕಾಡಮಿಯಲ್ಲಿ ತರಬೇತಿ ಕೊಡಿಸಬಹುದು. ತಮ್ಮ ಅವಧಿಯಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ ಮೋದಿ ಈ ಸಲಹೆಯನ್ನು ಪರಿಗಣಿಸಬಹುದು’ ಎಂದರು.
ವಿಶ್ವದ ಟಾಪ್100 ಶಕ್ತಿಶಾಲಿ ಉದ್ಯಮಿಗಳಲ್ಲಿ ಮುಕೇಶ್: ಮೊದಲ ಭಾರತೀಯ ಹಿರಿಮೆ
ಮುಂಬೈ: ಫಾರ್ಚ್ಯೂನ್ ಮ್ಯಾಗಜಿನ್ ವಿಶ್ವದ 100 ಅತ್ಯಂತ ಶಕ್ತಿಶಾಲಿ ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತೀಯೊಬ್ಬರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಇದೇ ಮೊದಲು. ಮುಕೇಶ್, ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಭಾರತೀಯ ಮೂಲದ ಇತರೆ ಉದ್ಯಮಿಗಳು ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರುಗಳೆಂದರೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲಾ, ಗೂಗಲ್ ಸಿಇಒ ಸುಂದರ್ ಪಿಚ್ಚೈ, ಆ್ಯಡೋಬ್‌ನ ಸಿಇಒ ಶಾಂತನು ನಾರಾಯಣ್, ಯೂಟ್ಯೂಬ್ ಸಿಇಒ ನೀಲ್ ಮೋಹನ್, ಹೂಡಿಕೆದಾರ ವಿನೋದ್ ಖೋಸ್ಲಾ, ಇಎಲ್‌ಎಫ್‌ನ ಸಿಇಒ ತರಂಗ್ ಅಮೀನ್.
ಬಂಗಾಳದ ಬಳಿಕ ಇದೀಗ ತಮಿಳ್ನಾಡಲ್ಲಿ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ
ಚೆನ್ನೈ: ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಸುದೀರ್ಘ ಮುಷ್ಕರ ಮುಗಿದ ಬೆನ್ನಲ್ಲೇ ಇದೀಗ ತಮಿಳುನಾಡಿನಲ್ಲಿ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.ಇಲ್ಲಿನ ಕಲೈಗ್ನಾರ್ ಸೆಂಟಿನರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಮಗ ಬುಧವಾರ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಖಂಡಿಸಿ ಹಾಗೂ ವೈದ್ಯಕೀಯ ವೃತ್ತಿಪರರ ಸುರಕ್ಷತೆಗೆ ಕ್ರಮವಹಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಹಾಗೂ ತಮಿಳುನಾಡು ಸರ್ಕಾರಿ ವೈದ್ಯರ ಅಸೋಸಿಯೇಶನ್‌ನಿಂದ ಗುರುವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಯಿತು.
ತುರ್ತು ಸೇವೆ ಹೊರತುಪಡಿಸಿದ ಉಳಿದ ಸೇವೆಗಳನ್ನು ವೈದ್ಯರು ಬಹಿಷ್ಕರಿಸಿದರು. ಈ ನಡುವೆ ಹಲ್ಲೆಗೆ ಒಳಗಾದ ಡಾ. ಬಾಲಾಜಿ ಅವರನ್ನು ದಾಖಲಿಸಿರುವ ಆಸ್ಪತ್ರೆಗೆ ವೈದ್ಯಕೀಯ ಸಚಿವ ಮಾ. ಸುಬ್ರಮಣಿಯನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ರಾಜ್ಯದ ಎಲ್ಲ ಆಸ್ಪತ್ರೆಯ ರೋಗಿಗಳ ಸಂದರ್ಶಕರಿಗೆ ಗುರುತಿನ ಟ್ಯಾಗ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಎಡಗಣ್ಣಿನ ಚಿಕಿತ್ಸೆಗೆ ಹೋದ ಬಾಲಕಗೆ ಬಲಗಣ್ಣಿನ ಚಿಕಿತ್ಸೆ ಮಾಡಿ ವೈದ್ಯರ ಎಡವಟ್ಟು!
ನೋಯ್ಡಾ: ಎಡಗಣ್ಣಿಗೆ ಶಸ್ತ್ರಚಿಕಿತ್ಸೆಗೆಂದು ಹೋಗಿದ್ದ 7 ವರ್ಷದ ಬಾಲಕನಿಗೆ ವೈದ್ಯರೊಬ್ಬರು ಬಲಗಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಎಡವಟ್ಟು ಮಾಡಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಇತ್ತೀಚೆಗೆ ಯುಧಿಷ್ಠಿರ ಎಂಬ ಬಾಲಕನ ಎಡಗಣ್ಣಿನಲ್ಲಿ ಯಾವಾಗಲು ನೀರು ಸೋರುತ್ತದೆ ಎಂದು ಆತನ ಪೋಷಕರು ಇಲ್ಲಿನ ಸ್ಪೆಕ್ಟ್ರಮ್ ಆಸ್ಪತ್ರೆಗೆ ದಾಖಲಿಸಿದ್ದರು. ಎಡಗಣ್ಣನ್ನು ಪರೀಕ್ಷಿಸಿದ ವೈದ್ಯ ‘ಕಣ್ಣಿನಲ್ಲಿ ಪ್ಲಾಸ್ಟಿಕ್ ಥರದ ವಸ್ತುವಿದೆ. ಅದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಬೇಕು. ಅದಕ್ಕೆ 45000 ರು. ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಯುಧಿಷ್ಠಿರನ ತಂದೆ ಹಣವನ್ನು ಪಾವತಿ ಮಾಡಿ ಶಸ್ತ್ರಚಿಕತ್ಸೆ ಮಾಡಿಸಿದ್ದು, ವೈದ್ಯರು ಎಡಗಣ್ಣಿಗೆ ಬದಲು ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ಅದನ್ನು ಅರಿತ ಬಾಲಕನ ಪೋಷಕರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ವೈದ್ಯನ ಪರವಾನಗಿ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ.