ಸಾರಾಂಶ
ದೇವಗಢ (ಜಾರ್ಖಂಡ್): ಜಾರ್ಖಂಡ್‌ನ ದೇವಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸಬೇಕಿದ್ದ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾದ ಕಾರಣ ಅವರು 2 ತಾಸು ಕಾಲ ವಿಮಾನ ನಿಲ್ದಾಣದಲ್ಲೇ ಬಾಕಿ ಆದ ಘಟನೆ ನಡೆದಿದೆ. ಬಳಿಕ ಮತ್ತೊಂದು ವಿಮಾನದಲ್ಲಿ ದಿಲ್ಲಿಗೆ ಮರಳಿದ್ದಾರೆ.
ದೇವಗಢದಿಂದ 80 ಕಿ.ಮೀ. ದೂರದಲ್ಲಿರುವ ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಅವರು ಜನಜಾತೀಯ ದಿವಸ ಸಮಾರಂಭಕ್ಕೆ ಆಗಮಿಸಿದ್ದರು. ದೇವಗಢಕ್ಕೆ ದಿಲ್ಲಿಯಿಂದ ವಾಯುಪಡೆ ವಿಮಾನದಲ್ಲಿ ಬಂದಿಳಿದು, ಅಲ್ಲಿಂದ ಜಮೂಯಿಗೆ ಹೆಲಿಕಾಪ್ಟರಲ್ಲಿ ತೆರಳಿದ್ದರು.
ಮರಳಿ ಹೆಲಿಕಾಪ್ಟರಲ್ಲಿ ದೇವಗಢಕ್ಕೆ ಬಂದು ವಾಯುಪಡೆ ವಿಮಾನ ಏರಿ ಕುಳಿತಿದ್ದರು. ಆಗ ವಿಮಾನದಲ್ಲಿ ದೋಷ ಪತ್ತೆಯಾದ ಕಾರಣ, ವಿಮಾನ ಮೇಲೇರಲಿಲ್ಲ. ಹೀಗಾಗಿ 2 ತಾಸು ದೇವಗಢದ ವಿಮಾನ ನಿಲ್ದಾಣದಲ್ಲೇ ಅವರು ಸಮಯ ಕಳೆದರು.
ಈ ವೇಳೆ ಎಷ್ಟೇ ಪ್ರಯತ್ನ ಪಟ್ಟರೂ ವಿಮಾನ ದುರಸ್ತಿ ಆಗಲಿಲ್ಲ. ಹಾಗಾಗಿ 2 ತಾಸು ನಂತರ ಅವರು ನವದೆಹಲಿಯಿಂದ ಕಳುಹಿಸಲಾದ ಮತ್ತೊಂದು ಭಾರತೀಯ ವಾಯುಪಡೆ ವಿಮಾನದಲ್ಲಿ ದೆಹಲಿಗೆ ತೆರಳಿದರು. ಮೋದಿ ದೇವಗಢದಲ್ಲೇ ಸಿಲುಕಿದಾಗ 2 ತಾಸು ಜಾರ್ಖಂಡ್‌ನ ಕೆಲವೆಡೆ ವಾಯುಸಂಚಾರ ನಿಷೇಧಿಸಲಾಗಿತ್ತು ಎಂದು ದೇವಗಢ ಜಿಲ್ಲಾಧಿಕಾರಿ ವಿಶಾಲ್ ಸಾಗರ್ ಹೇಳಿದ್ದಾರೆ.