ಕಾನೂನುಗಳ ಬದಲಾವಣೆಗೆ ಪ್ರಧಾನಿ ಮೋದಿ ಸಮರ್ಥನೆ

| Published : Jan 29 2024, 01:32 AM IST

ಸಾರಾಂಶ

ಬದಲಾದ ಕಾನೂನುಗಳು ವಿಕಸಿತ ಭಾರತಕ್ಕೆ ನಾಂದಿಯಾಗಿವೆ ಎಂದು ಸುಪ್ರೀಂ ಕೋರ್ಟ್‌ ವಜ್ರ ಮಹೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಣ್ಣನೆ ಮಾಡಿದ್ದಾರೆ.

ನವದೆಹಲಿ: ‘ಕೇಂದ್ರ ಸರ್ಕಾರವು ಆಧುನಿಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಕಾನೂನುಗಳನ್ನು ಮಾರ್ಪಾಡುಗೊಳಿಸುವ ಕೆಲಸ ಮಾಡುತ್ತಿದೆ. ಇಂದು ಬದಲಾಗಿರುವ ಕಾನೂನುಗಳು ನಾಳಿನ ವಿಕಸಿತ ಭಾರತ ರೂಪುಗೊಳ್ಳಲು ಸಹಕಾರಿಯಾಗಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ. ಭಾನುವಾರ ಸುಪ್ರೀಂ ಕೋರ್ಟ್‌ನ ವಜ್ರ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಬ್ರಿಟಿಷ್‌ ಕಾಲದಲ್ಲಿ ಜಾರಿಯಾಗಿದ್ದ ಐಪಿಸಿ, ಸಿಆರ್‌ಪಿಸಿ ಮತ್ತು ಭಾರತೀಯ ಸಾಕ್ಷ್ಯ ಸಂಹಿತೆಯನ್ನು ತೆಗೆದುಹಾಕಿ ಆಧುನಿಕ ಕಾಲಮಾನಕ್ಕೆ ತಕ್ಕಂತೆ ಹೊಸ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ವಿಕಸಿತ ಭಾರತದಲ್ಲಿ ಪಾರದರ್ಶಕವಾಗಿ ಮುನ್ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಲಾಗಿದೆ’ ಎಂದರು.

‘ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿ ಭಾರತದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡಿದೆ’ ಎಂದು ಪರೋಕ್ಷವಾಗಿ ತಮ್ಮ ಸರ್ಕಾರ ಜಾರಿಗೆ ತಂದಿದ್ದ ಅಪರಾಧ ಕಾನೂನುಗಳ ಬದಲಾವಣೆಯ ಕ್ರಮವನ್ನು ಮೋದಿ ಸಮರ್ಥಿಸಿಕೊಂಡರು. ಇದೇ ವೇಳೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ವಿಸ್ತರಿಸಲು 800 ಕೋಟಿ ರು.ಗಳನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು.