ಸಾರಾಂಶ
ಪಣಜಿ : ಯೋಧರೊಂದಿಗೆ ದೀಪಾವಳಿ ಆಚರಿಸುವ ತಮ್ಮ ವಾರ್ಷಿಕ ಪರಿಪಾಠವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವೂ ಮುಂದುವರಿಸಿದ್ದಾರೆ. ಕಾರವಾರ-ಗೋವಾ ಕರಾವಳಿಯಲ್ಲಿ ಲಂಗರು ಹಾಕಿರುವ ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯಲ್ಲಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
ಭಾನುವಾರ ಸಂಜೆಯೇ ಕಾರವಾರ-ಗೋವಾ ಕರಾವಳಿಗೆ ಆಗಮಿಸಿದ ಪ್ರಧಾನಿ, ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧನೌಕೆಯನ್ನು ಏರಿದರು. ಈ ವೇಳೆ ಮಿಗ್ 29ಕೆ ಯುದ್ಧವಿಮಾನಗಳನ್ನು ನಿಲ್ಲಿಸುವ ಪಾರ್ಕಿಂಗ್ ತಾಣಕ್ಕೆ (ಫ್ಲೈಟ್‌ಡೆಕ್) ಭೇಟಿ ನೀಡಿದರು.
ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ವಿಮಾನವಾಹಕ ನೌಕೆಯ (ಏರ್‌ಕ್ರಾಫ್ಟ್ ಕ್ಯಾರಿಯರ್) ಸಣ್ಣ ರನ್‌ವೇಯಲ್ಲಿ ಮಿಗ್ 29 ಯುದ್ಧವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವೀಕ್ಷಿಸಿದರು. ಈ ವೇಳೆ ನೌಕಾಪಡೆಯ ಅಧಿಕಾರಿಗಳು ಮತ್ತು ನಾವಿಕರು ಆಪರೇಷನ್ ಸಿಂದೂರದ ವಿಜಯವನ್ನು ವರ್ಣಿಸಿ ತಾವೇ ರಚಿಸಿದ ದೇಶಭಕ್ತಿಗೀತೆಗಳನ್ನು ಮೋದಿ ಅವರ ಮುಂದೆ ಹಾಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೋದಿ ಕಣ್ತುಂಬಿಕೊಂಡರು.
ಆ ಬಳಿಕ ಸಿಬ್ಬಂದಿಗಳೊಂದಿಗೆ ಭೋಜನ ಸವಿದರು. ಸೋಮವಾರ ಬೆಳಿಗ್ಗೆ ಐಎನ್ಎಸ್ ವಿಕ್ರಾಂತ್‌ನ ಡೆಕ್ (ಜಗುಲಿ)ನಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಯುದ್ಧವಿಮಾನಗಳ ಹಾರಾಟವನ್ನು ವೀಕ್ಷಿಸಿದರು. ನಂತರ ಸಿಬ್ಬಂದಿಗಳನ್ನುದ್ದೇಶಿಸಿ ಸ್ಫೂರ್ತಿದಾಯಕ ಭಾಷಣ ಮಾಡಿ, ಸಿಹಿತಿಂಡಿಗಳನ್ನು ಹಂಚಿ ಸಂತಸಪಟ್ಟರು. 2014ರಲ್ಲಿ ಪ್ರಧಾನಿಯಾದಾಗಿನಿಂದಲೂ ಮೋದಿಯವರು ದೀಪಾವಳಿಯನ್ನು ಯೋಧರೊಂದಿಗೆ ಆಚರಿಸುತ್ತಾ ಬಂದಿದ್ದಾರೆ.