ಸಾರಾಂಶ
ಪ್ರಧಾನಿ ನರೇಂದ್ರ ಮೋದಿಗೆ ಹಣದುಬ್ಬರ ಮತ್ತು ನಿರುದ್ಯೋಗದ ವಾಸ್ತವಿಕ ಅರಿವಿಲ್ಲ. ಅವರಿಗೆ ಅಧಿಕಾರದ ಮದ ಏರಿರುವುದರಿಂದ ಅವರ ಬಳಿ ಇರುವ ಅಧಿಕಾರಿಗಳು ಮೋದಿಗೆ ಸತ್ಯಾಂಶ ಹೇಳಲು ಹೆದರುತ್ತಾರೆ.
ಜೈಪುರ: ಪ್ರಧಾನಿ ನರೇಂದ್ರ ಮೋದಿಗೆ ಹಣದುಬ್ಬರ ಮತ್ತು ನಿರುದ್ಯೋಗದ ವಾಸ್ತವಿಕ ಅರಿವಿಲ್ಲ. ಅವರಿಗೆ ಅಧಿಕಾರದ ಮದ ಏರಿರುವುದರಿಂದ ಅವರ ಬಳಿ ಇರುವ ಅಧಿಕಾರಿಗಳು ಮೋದಿಗೆ ಸತ್ಯಾಂಶ ಹೇಳಲು ಹೆದರುತ್ತಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಈ ಕುರಿತು ನೈಜ ಪರಿಹಾರ ಕಂಡುಕೊಳ್ಳದೆ ಜನರಿಗೆ ಸಂಬಂಧಪಡದ ಯೋಜನೆಗಳತ್ತ ಗಮನ ಹರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಕಿಡಿ ಕಾರಿದರು.
ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಪರ ಪ್ರಚಾರ ಕೈಗೊಂಡ ವೇಳೆ ಮಾತನಾಡಿ, ‘ದೇಶದಲ್ಲಿ ಪ್ರಧಾನಿ ಮೋದಿ ಏನೇ ಮಾತನಾಡಿದರೂ ಜನತೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮಾತನಾಡುತ್ತಾರೆ. ಅವರಿಗೆ ದೇಶದಲ್ಲಿರುವ ನೈಜ ಹಣದುಬ್ಬರ ಮತ್ತು ನಿರುದ್ಯೋಗದ ಅಗಾಧತೆಯ ಪ್ರಮಾಣದ ಅರಿವು ಇಲ್ಲವೇ ಇಲ್ಲ. ಹೀಗಾಗಿ ಅವರು ತಮ್ಮನ್ನು ತಾವು ಉಬ್ಬೇರಿಸಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.