ಸಾರಾಂಶ
ಮುಂಬೈ: ಸದನದಲ್ಲಿ ನಿಯಮ ಉಲ್ಲಂಘಿಸುವ ಸಂಸದರಿಗೆ ಬುದ್ಧಿ ಹೇಳುವ ಬದಲು, ರಾಜಕೀಯ ಪಕ್ಷಗಳು ಸಮರ್ಥಿಸುವ ಮನೋಭಾವ ಪ್ರದರ್ಶಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿದ್ದ ವಿಪಕ್ಷಗಳಿಗೆ ಚಾಟಿ ಬೀಸಿದ್ದಾರೆ.
84ನೇ ಅಖಿಲ ಭಾರತ ಸದನ ಸಭಾಧ್ಯಕ್ಷರ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಹಿಂದಿನ ಕಾಲದಲ್ಲಿ ತಪ್ಪು ಮಾಡುವ ಸಂಸದರನ್ನು ಹಿರಿಯ ಸಂಸದೀಯ ಪಟುಗಳು ತಿದ್ದಿ ತೀಡಿ ತಪ್ಪು ಮರುಕಳಿಸದಂತೆ ಬೋಧಿಸುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ತಪ್ಪು ಮಾಡುವ ಸಂಸದರಿಗೆ ತಿದ್ದುವ ಬದಲು ಅವರು ಮಾಡಿರುವ ತಪ್ಪನ್ನೇ ಸಮರ್ಥಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಇದು ಉತ್ತಮ ಸಂಸದೀಯ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿದೆ’ ಎಂದು ವಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಇದೇ ವೇಳೆ, ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ, ರಾಜ್ಯಸಭೆ ಕಲಾಪಗಳ ಮಾಹಿತಿಗಳು ಒಂದೇ ಆನ್‌ಲೈನ್ ವೇದಿಕೆಯಲ್ಲಿ ಲಭ್ಯವಾಗುವ ‘ಒಂದು ದೇಶ, ಒಂದು ಸಂಸದೀಯ ವೇದಿಕೆ’ ರಚನೆ ಕಾರ್ಯರೂಪದಲ್ಲಿದೆ ಎಂದು ಹೇಳಿದರಿ.
‘ಯುವ ಸಂಸದರನ್ನು ಸಂಸದೀಯ ಉಪಸಮಿತಿಗಳಲ್ಲಿ ಸದಸ್ಯರನ್ನಾಗಿ ಮಾಡಿ ಕಾನೂನು ರಚನಾ ಪ್ರಕ್ರಿಯೆಯಲ್ಲಿ ಹೆಚ್ಚು ಪಳಗುವಂತೆ ಮಾಡಬೇಕಾದ ಅಗತ್ಯವಿದೆ’ ಎಂದೂ ತಿಳಿಸಿದರು.
ಇತ್ತೀಚೆಗಷ್ಟೇ ಸಂಸತ್‌ನಲ್ಲಿ ಅಶಿಸ್ತು ಪ್ರದರ್ಶಿಸಿದ್ದ ಸಂಸದರನ್ನು ಅಮಾನತು ಮಾಡಿದ ವೇಳೆ ಉಳಿದ ಸದಸ್ಯರೂ ಸದನವನ್ನು ಬಹಿಷ್ಕರಿಸಿ ಅಮಾನತಾದವರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೋದಿ ಬಗ್ಗೆ ನಾಟಕದಲ್ಲಿ ಅವಹೇಳನ: 2 ಕೇರಳ ಹೈಕೋರ್ಟ್ ಸಿಬ್ಬಂದಿ ಸಸ್ಪೆಂಡ್
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಗಣರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ನಾಟಕ ಪ್ರದರ್ಶನದಲ್ಲಿ ಅವಹೇಳನ ಮಾಡಿದದ ಆರೋಪದ ಮೇಲೆ ಕೇರಳ ಹೈಕೋರ್ಟ್‌ನ ಇಬ್ಬರು ಸಹಾಯಕ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಕೇರಳ ಹೈಕೋರ್ಟ್‌ನಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿರುವ ಸುಧೀಶ್ ಟಿಎ ಮತ್ತು ನ್ಯಾಯಾಲಯದಲ್ಲಿ ಕೀಪರ್ ಆಗಿರುವ ಸುಧೀಶ್ ಪಿ ಎಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾ ಮಾಡಲಾಗಿದೆ.
ಅಮಾನತಾದವರಲ್ಲಿ ಒಬ್ಬರು ನರೇಂದ್ರ ಮೋದಿಯ ಪಾತ್ರ ಮಾಡಿದ್ದು, ಅದರಲ್ಲಿ ಅವರನ್ನು ಅಣಕಿಸುವ ಶೈಲಿಯಲ್ಲಿ ಮಾತನಾಡಿ ಮತ್ತು ಆಂಗಿಕ ಅಭಿನಯ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಮತ್ತೊಬ್ಬರು ಕೇಂದ್ರ ಸರ್ಕಾರದ ಯೋಜನೆಗಳಾದ ಜಲಜೀವನ್ ಮಿಷನ್ ಮತ್ತು ಆಜಾ಼ದಿ ಅಮೃತ ಮಹೋತ್ಸವದ ಕುರಿತು ಆಕ್ಷೇಪಾರ್ಹ ದೃಶ್ಯಗಳಲ್ಲಿ ನಟಿಸಿದ ಆರೋಪದ ಮೇಲೆ ಸಸ್ಪೆಂಡ್ ಆಗಿದ್ದಾರೆ.
ನಾಳೆ ಮೋದಿ ಅವರಿಂದ 7ನೇ ‘ಪರೀಕ್ಷಾ ಪೇ ಚರ್ಚಾ’
ಶಾಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ವಾರ್ಷಿಕವಾಗಿ ನಡೆಸುವ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದ 7ನೇ ಆವೃತ್ತಿಯು ಜ.29ರಂದು ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ,
ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಈ ಬಾರಿ ಪ್ರತಿ ರಾಜ್ಯದಿಂದ ತಲಾ ಇಬ್ಬರು ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಅಲ್ಲದೆ ರಾಷ್ಟ್ರೀಯ ಕಲೋತ್ಸವದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಏಕಲವ್ಯ ಮಾದರಿ ವಸತಿ ಶಾಲೆಯ ಆಯ್ದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ದಾಖಲೆಯ 2.26 ಕೋಟಿ ವಿದ್ಯಾರ್ಥಿಗಳು ಸಂವಾದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.