ಸಾರಾಂಶ
ಪ್ರಧಾನಿ ನರೇಂದ್ರ ಮೋದಿ, ಶ್ರೀನಗರದಿಂದ ತುಸು ದೂರದಲ್ಲಿರುವ ಶಂಕರಾಚಾರ್ಯರ ಬೆಟ್ಟಕ್ಕೆ ದೂರದಿಂದಲೇ ನಮಿಸಿದರು.
ಶ್ರೀನಗರ: ವಿಧಿ 370ರ ರದ್ದತಿ ನಂತರ ಮೊದಲ ಬಾರಿ ಕಾಶ್ಮೀರದ ಪ್ರವಾಸಕ್ಕೆ ಗುರುವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಶ್ರೀನಗರದಿಂದ ತುಸು ದೂರದಲ್ಲಿರುವ ಶಂಕರಾಚಾರ್ಯರ ಬೆಟ್ಟಕ್ಕೆ ದೂರದಿಂದಲೇ ನಮಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕಾಶ್ಮೀರದ ಭೇಟಿಯ ವೇಳೆ ಶ್ರೀನಗರದಲ್ಲಿರುವ ಶಂಕರಾಚಾರ್ಯ ಬೆಟ್ಟದ ಸೌಂದರ್ಯವನ್ನು ದೂರದಿಂದಲೇ ಸವಿಯುವ ಅವಕಾಶ ಲಭಿಸಿದೆ. ಅದಕ್ಕೆ ಶಿರಬಾಗಿ ವಂದಿಸಿದ್ದೇನೆ’ ಎಂದು ಚಿತ್ರಗಳನ್ನೂ ಟ್ಯಾಗ್ ಮಾಡಿದ್ದಾರೆ.
ಶಂಕರಾಚಾರ್ಯ ಬೆಟ್ಟದ ಮಹತ್ವ: ಕಾಶ್ಮೀರದ ಶ್ರೀನಗರದ ಬಳಿಯಿರುವ ಶಂಕರಾಚಾರ್ಯ ಬೆಟ್ಟಕ್ಕೆ ಅದ್ವೈತ ಸಿದ್ಧಾಂತದ ಪ್ರತಿಪಾದಕ ಮತ್ತು ಬೋಧಕರಾಗಿದ್ದ ಆದಿ ಶಂಕರರು ಭೇಟಿ ನೀಡಿರುವ ಐತಿಹ್ಯವಿದೆ.
ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಮತ್ತು ಬೆಟ್ಟದ ಶಿಖರದಲ್ಲಿರುವ ದೇಗುಲಕ್ಕೆ ಶಂಕರರ ಹೆಸರು ಬಂದಿತೆಂದು ನಂಬಲಾಗಿದೆ.
ಇಲ್ಲಿಗೆ ಹಿಂದೂಗಳು ಅಮರನಾಥ ಯಾತ್ರೆಯ ವೇಳೆ ಭೇಟಿ ನೀಡುತ್ತಾರೆ. ಈ ಸಮಯದಲ್ಲಿ ಶಿವಲಿಂಗವನ್ನು ಬೆಟ್ಟದ ಮೇಲಿರುವ ಆದಿ ಶಂಕರ ದೇಗುಲಕ್ಕೆ ಕೊಂಡೊಯ್ಯಲಾಗುತ್ತದೆ.