ವನ್ಯಜೀವಿಗಳ ಜೊತೆ ಪ್ರಧಾನಿ ಮೋದಿ ಮುದ್ದಾಟ

| Published : Mar 05 2025, 12:35 AM IST

ಸಾರಾಂಶ

ಉದ್ಯಮಿ ಅನಂತ್ ಅಂಬಾನಿ ಮುಖ್ಯಸ್ಥರಾಗಿರುವ ಗುಜರಾತ್‌ನ ಜಾಮ್‌ನಗರದ ಪ್ರಾಣಿ ಸಂರಕ್ಷಣಾ ಕೇಂದ್ರವಾದ ‘ವನ್‌ತಾರಾ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿದರು.

ನವದೆಹಲಿ: ಉದ್ಯಮಿ ಅನಂತ್ ಅಂಬಾನಿ ಮುಖ್ಯಸ್ಥರಾಗಿರುವ ಗುಜರಾತ್‌ನ ಜಾಮ್‌ನಗರದ ಪ್ರಾಣಿ ಸಂರಕ್ಷಣಾ ಕೇಂದ್ರವಾದ ‘ವನ್‌ತಾರಾ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಉಪಕ್ರಮವಾದ ವನ್‌ತಾರಾವನ್ನು ಉದ್ಘಾಟಿಸಲಾಯಿತು. ಇದು ಪ್ರಾಣಿಗಳಿಗೆ ಸುರಕ್ಷಿತ ತಾಣವನ್ನು ಒದಗಿಸುತ್ತದೆ. ಪರಿಸರ ಸುಸ್ಥಿರತೆ ಮತ್ತು ವನ್ಯಜೀವಿ ಕಲ್ಯಾಣವನ್ನು ಉತ್ತೇಜಿಸುತ್ತದೆ. ಈ ಪ್ರಯತ್ನಕ್ಕಾಗಿ ಅನಂತ್ ಅಂಬಾನಿ ಮತ್ತು ಅವರ ತಂಡವನ್ನು ಶ್ಲಾಘಿಸುತ್ತೇನೆ’ ಎಂದಿದ್ದಾರೆ.

ಭೇಟಿ ವೇಳೆ ‘ಪ್ರಧಾನಿಯವರು ಒಕಾಪಿಯನ್ನು ತಟ್ಟಿದರು. ಚಿಂಪಾಂಜಿಗಳನ್ನು ವೀಕ್ಷಿಸಿದರು. ಒರಾಂಗುಟನ್‌ಗಳನ್ನು ಅಪ್ಪಿಕೊಂಡು ಪ್ರೀತಿಯಿಂದ ಆಟವಾಡಿದರು. ನೀರುನಾಯಿಯನ್ನು, ಮೊಸಳೆಗಳನ್ನು ನೋಡಿದರು. ಜೀಬ್ರಾಗಳ ನಡುವೆ ನಡೆದಾಡಿದರು. ಜಿರಾಫೆ ಮತ್ತು ಖಡ್ಗಮೃಗದ ಮರಿಗೆ ಆಹಾರವನ್ನು ನೀಡಿದರು’ ಎಂದು ವನ್‌ತಾರಾ ಹೇಳಿಕೆ ನೀಡಿದೆ.

ವನ್‌ತಾರಾ ಭೇಟಿ ವೇಳೆ ಪ್ರಧಾನಿ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿ, ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು.

ವನ್‌ತಾರಾದಲ್ಲಿ 1.5 ಲಕ್ಷ ಪ್ರಾಣಿಗಳಿಗೆ ನೆಲೆ

ಭಾರತ ಸೇರಿದಂತೆ ವಿದೇಶಗಳಲ್ಲಿ ಗಾಯಗೊಂಡ ವನ್ಯಜೀವಿಗಳಿಗೆ ರಕ್ಷಣೆ, ಆರೈಕೆ, ಚಿಕಿತ್ಸೆ ನೀಡಲು ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ರಿಫೈನರಿ ಸಮುಚ್ಚಯದಲ್ಲಿ ‘ವನ್‌ತಾರಾ’ (ಸ್ಟಾರ್ ಆಫ್ ದಿ ಫಾರೆಸ್ಟ್) ವನ್ಯಜೀವಿ ರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡಷನ್‌ನ ನಿರ್ದೇಶಕ ಅನಂತ್ ಅಂಬಾನಿ ಇದನ್ನು ಮುಖ್ಯಸ್ಥರಾಗಿದ್ದಾರೆ. ಇದು ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿದೆ. ಪ್ರಾಣಿಗಳ ರಕ್ಷಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ವನ್ಯಜೀವಿ ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿ ಇದನ್ನು ನಿರ್ಮಿಸಲಾಗಿದೆ. 2,000ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ ಪ್ರಭೇದಗಳಿಗೆ ಮತ್ತು 1.5 ಲಕ್ಷಕ್ಕೂ ಹೆಚ್ಚು ಅಪಾಯದಿಂದ ರಕ್ಷಿಸಲ್ಪಟ್ಟ, ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆ ಕಲ್ಪಿಸಲಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವು ವನ್ಯಜೀವಿ ವಿಜ್ಞಾನಿಗಳು ಮತ್ತು ವೈದ್ಯಕೀಯ ವಿಜ್ಞಾನಿಗಳು ಈ ಯೋಜನೆಯಲ್ಲಿ ಕೈಜೋಡಿಸಿದ್ದಾರೆ. ದೇಶದಲ್ಲಿರುವ 150ಕ್ಕೂ ಹೆಚ್ಚು ಮೃಗಾಲಯಗಳ ಸುಧಾರಣೆ ಗುರಿಯನ್ನು ವನ್‌ತಾರಾ ಹೊಂದಿದೆ.