ಸಾರಾಂಶ
ಪಿಟಿಐ ಇಟಾನಗರ/ನವದೆಹಲಿ
ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ಅರುಣಾಚಲಪ್ರದೇಶದ ತಾವಾಂಗ್ ಪ್ರದೇಶಕ್ಕೆ ಸರ್ವಋತು ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ಸಮುದ್ರಮಟ್ಟದಿಂದ 13000 ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ಉದ್ದದ ಬೈಲೇನ್ ಸುರಂಗ (ಜೋಡಿ ಸುರಂಗ) ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ ಲೋಕಾರ್ಪಣೆ ಮಾಡಿದರು.
ಈ ಸುರಂಗ ಮಾರ್ಗದಿಂದ ಅಸ್ಸಾಂನ ತೇಜ್‌ಪುರದಿಂದ ಅರುಣಾಚಲಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಗೆ ಸಂಪರ್ಕ ಸಾಧ್ಯವಾಗಲಿದೆ. 825 ಕೋಟಿ ರು. ವೆಚ್ಚದಲ್ಲಿ ಸೇಲಾ ಎಂಬಲ್ಲಿ ಈ ಸುರಂಗ ನಿರ್ಮಿಸಲಾಗಿದೆ.
ಅರುಣಾಚಲಪ್ರದೇಶ ತನ್ನದೆಂದು ಪದೇ ಪದೇ ಮೊಂಡು ವಾದ ಮಂಡಿಸಿ ತಗಾದೆ ತೆಗೆಯುವ ಚೀನಾಕ್ಕೆ ಈ ಸುರಂಗ ಉತ್ತರ ನೀಡಿದಂತಿದೆ.
ಈ ಸುರಂಗ ಬಳಸಿ ಅರುಣಾಚಲಪ್ರದೇಶದ ಗಡಿ ವಾಸ್ತವಿಕ ರೇಖೆಗೆ ಸೇನಾಪಡೆಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಭೂಕುಸಿತ, ಹಿಮಪಾತದಂತಹ ಪ್ರತಿಕೂಲ ಹವಾಮಾನ ಸಂದರ್ಭದಲ್ಲೂ ರವಾನಿಸಬಹುದಾಗಿದೆ.
ಸುರಂಗದ ವಿಶೇಷತೆ:ಸೇಲಾ ಸುರಂಗ ಯೋಜನೆಯಡಿ ಎರಡು ಪ್ರತ್ಯೇಕ ಸುರಂಗಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ಸುರಂಗ 980 ಮೀಟರ್ ಉದ್ದವಿದೆ. ಅದು ಏಕ ಮಾರ್ಗವಾಗಿದೆ.
ಮತ್ತೊಂದು ಸುರಂಗ 1555 ಮೀಟರ್ ಉದ್ದವಿದ್ದು, ದ್ವಿಪಥವಾಗಿದೆ. ಒಂದು ಮಾರ್ಗವನ್ನು ವಾಹನಗಳ ಸಂಚಾರಕ್ಕೆ, ಮತ್ತೊಂದನ್ನು ತುರ್ತು ಸೇವೆಗಳಿಗೆ ಬಳಸಬಹುದಾಗಿದೆ. ಈ ಎರಡೂ ಸುರಂಗಗಳಿಗೆ 1200 ಮೀಟರ್ ಉದ್ದದ ಲಿಂಕ್ ರಸ್ತೆಯನ್ನು ನಿರ್ಮಿಸಲಾಗಿದೆ.
ಈ ಸುರಂಗ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು 2019ರ ಫೆ.9ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಐದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
ಸುರಂಗ ನಿರ್ಮಾಣಕ್ಕೆ 90 ಲಕ್ಷ ಮಾನವ ದಿನಗಳು ಬಳಕೆಯಾಗಿವೆ. ಕಳೆದು ಐದು ವರ್ಷಗಳ ಅವಧಿಯಲ್ಲಿ ನಿತ್ಯ ಸರಾಸರಿ 650 ನೌಕರರು, ಕಾರ್ಮಿಕರು ಕೆಲಸ ಮಾಡಿದ್ದಾರೆ. 71000 ಮೆಟ್ರಿಕ್ ಟನ್ ಸಿಮೆಂಟ್, 5000 ಮೆಟ್ರಿಕ್ ಟನ್ ಉಕ್ಕು, 800 ಮೆಟ್ರಿಕ್ ಟನ್ ಸ್ಫೋಟಕಗಳನ್ನು ಬಳಸಲಾಗಿದೆ.