ರಷ್ಯಾದಿಂದ ತೈಲ ಖರೀದಿ ಮುಂದುವರೆಸಿರುವ ಭಾರತದ ಬಗ್ಗೆ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನಾವು ಮತ್ತೆ ಯಾವುದೇ ಕ್ಷಣದಲ್ಲಿ ಭಾರತದ ಮೇಲಿನ ತೆರಿಗೆ ಹೆಚ್ಚಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.  

 ವಾಷಿಂಗ್ಟನ್‌/ ನವದೆಹಲಿ : ರಷ್ಯಾದಿಂದ ತೈಲ ಖರೀದಿ ಮುಂದುವರೆಸಿರುವ ಭಾರತದ ಬಗ್ಗೆ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನಾವು ಮತ್ತೆ ಯಾವುದೇ ಕ್ಷಣದಲ್ಲಿ ಭಾರತದ ಮೇಲಿನ ತೆರಿಗೆ ಹೆಚ್ಚಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ರಷ್ಯಾ ತೈಲ ಖರೀದಿ ಬಗ್ಗೆ ನಾನು ಅತೃಪ್ತಿ ಹೊಂದಿರುವ ವಿಷಯ ಮೋದಿಗೂ ಗೊತ್ತು ಎಂದು ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ‘ರಷ್ಯಾ- ಉಕ್ರೇನ್ ಯುದ್ಧ ಸ್ಥಗಿತದ ನಿಟ್ಟಿನಲ್ಲಿ ಪುಟಿನ್‌ ಮತ್ತು ಅವರ ಗ್ರಾಹಕರ ಮೇಲೆ ಒತ್ತಡ ಹೇರುವುದು ಅಗತ್ಯ. ಭಾರತ ಈಗಲೂ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಮೋದಿ ಒಳ್ಳೆಯ ವ್ಯಕ್ತಿ. ಆದರೆ, ನಾನು ಅವರ ಬಗ್ಗೆ ತೃಪ್ತಿ ಹೊಂದಿಲ್ಲ ಮತ್ತು ನನ್ನನ್ನು ಖುಷಿಯಾಗಿ ಇಡುವುದು ಎಷ್ಟು ಮುಖ್ಯ ಎಂದು ಮೋದಿಗೂ ಗೊತ್ತು. ಆದರೂ ಅವರು ವ್ಯಾಪಾರ ಮುಂದುವರೆಸಿದ್ದಾರೆ. ನಾವು ಈ ವಿಷಯದಲ್ಲಿ ಬಹುಬೇಗ ತೆರಿಗೆ ಹೆಚ್ಚಿಸಬಹುದು. ಅದು ಅವರ ಪಾಲಿಗೆ ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಟ್ರಂಪ್‌ ಜೊತೆಗಿದ್ದ ಅಮೆರಿಕ ಸಂಸದ ಲಿಂಡ್ಸೆ ಗ್ರಹಾಂ ಮಾತನಾಡಿ,‘ತಿಂಗಳ ಹಿಂದೆ ನಾನು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಮನೆಗೆ ತೆರಳಿದ್ದೆ. ಈ ವೇಳೆ ಅವರು ಭಾರತ, ರಷ್ಯಾದ ತೈಲ ಖರೀದಿಯನ್ನು ಹೇಗೆ ಕಡಿಮೆ ಮಾಡಿದೆ ಎಂಬುದರ ಬಗ್ಗೆ ಮಾತನಾಡಲು ಬಯಸಿದ್ದರು. ಜೊತೆಗೆ ಭಾರತದ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವಂತೆ ನೀವು ಟ್ರಂಪ್‌ಗೆ ಹೇಳಬಹುದೇ ಎಂದು ನನ್ನನ್ನು ಕೋರಿದ್ದರು. ಅಮೆರಿಕ ಭಾರತದ ಮೇಲೆ ತೆರಿಗೆ ಹಾಕಿದ ಕಾರಣಕ್ಕಾಗಿಯೇ ಅವರು ಇದೀಗ ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡಿದ್ದಾರೆ’ ಎಂದು ಹೇಳಿದ್ದರು.

ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್‌ ಮನೆ ಮೇಲೆ ದಾಳಿ: ವ್ಯಕ್ತಿ ಸೆರೆ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಓಹಿಯೋದ ಸಿನ್ಸಿನಾಟಿ ನಿವಾಸದ ಮೇಲೆ ವ್ಯಕ್ತಿಯೊಬ್ಬ ದಾಳಿಗೆ ಯತ್ನಿಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಸೋಮವಾರ ಮುಂಜಾನೆ ಆರೋಪಿಯನ್ನು ಬಂಧಿಸಲಾಗಿದೆ. ದಾಳಿ ವೇಳೆ ವ್ಯಾನ್ಸ್ ಮತ್ತು ಕುಟುಂಬ ಓಹಿಯೋ ಮನೆಯಲ್ಲಿರಲಿಲ್ಲ. ಬದಲಾಗಿ ವಾಷಿಂಗ್ಟನ್‌ನಲ್ಲಿದ್ದರು. ಹಾಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮನೆ ಮತ್ತು ಇತರ ವಸ್ತುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೊಡ್ಡ ಸಪ್ಪಳ ಕೇಳಿಬಂದಿದೆ

ಭಾನುವಾರ ಮಧ್ಯರಾತ್ರಿ ವ್ಯಾನ್ಸ್‌ ಮನೆಯ ಭದ್ರತೆಗೆ ನಿಯೋಜಿಸಿದ್ದ ಗುಪ್ತ ಸೇವೆ ಏಜೆಂಟರಿಗೆ ದೊಡ್ಡ ಸಪ್ಪಳ ಕೇಳಿಬಂದಿದೆ. ಪರಿಶೀಲನೆಗೆ ಮುಂದಾದಾಗ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಕಿಟಕಿ ಗಾಜು ಒಡೆದು, ನುಗ್ಗಲೆತ್ನಿಸಿದ್ದು ಕಂಡುಬಂದಿದೆ. ಮನೆಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದ ಗುಪ್ತ ಸೇವೆ ಅಧಿಕಾರಿಗಳ ವಾಹನಕ್ಕೂ ದುಷ್ಕರ್ಮಿ ಹಾನಿ ಮಾಡಿದ್ದಾನೆ.