ನಮೋಸ್ತೆ ಚೀನಾ ! 7 ವರ್ಷ ಬಳಿಕ ಮೋದಿ ಚೀನಾಕ್ಕೆ - ಶಾಂಘೈ ಶೃಂಗದಲ್ಲಿ ಭಾಗಿ

| N/A | Published : Aug 31 2025, 01:08 AM IST / Updated: Aug 31 2025, 04:53 AM IST

ಸಾರಾಂಶ

ವಿಶ್ವಾದ್ಯಂತ ತಲ್ಲಣ ಮೂಡಿಸಿರುವ ಅಮೆರಿಕದ ತೆರಿಗೆ ಗದ್ದಲದ ನಡುವೆಯೇ ಆ.31 ಹಾಗೂ ಸೆ.1ರಂದು ನಡೆಯಲಿರುವ ಶಾಂಘೈ ಕೋಆಪರೇಷನ್‌ ಆರ್ಗನೈಸೇಷನ್‌ (ಎಸ್‌ಸಿಒ) ಶೃಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚೀನಾದ ತಿಯಾನ್‌ಜಿನ್‌ಗೆ ಆಗಮಿಸಿದ್ದಾರೆ.

  ಟಿಯಾನ್‌ಜಿನ್‌ (ಚೀನಾ) :  ವಿಶ್ವಾದ್ಯಂತ ತಲ್ಲಣ ಮೂಡಿಸಿರುವ ಅಮೆರಿಕದ ತೆರಿಗೆ ಗದ್ದಲದ ನಡುವೆಯೇ ಆ.31 ಹಾಗೂ ಸೆ.1ರಂದು ನಡೆಯಲಿರುವ ಶಾಂಘೈ ಕೋಆಪರೇಷನ್‌ ಆರ್ಗನೈಸೇಷನ್‌ (ಎಸ್‌ಸಿಒ) ಶೃಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚೀನಾದ ತಿಯಾನ್‌ಜಿನ್‌ಗೆ ಆಗಮಿಸಿದ್ದಾರೆ. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸೇರಿ ಹಲವು ವಿಶ್ವನಾಯಕರ ಜತೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ.

7 ವರ್ಷದ ಬಳಿಕ ಹಾಗೂ 2020ರ ಗಲ್ವಾನ್‌ ಗಡಿ ಸಂಘರ್ಷದ ಬಳಿಕ ಮೋದಿ ಅವರು ಇದೇ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡುತ್ತಿದ್ದು, ಇದು ಐತಿಹಾಸಿಕ ಭೇಟಿ ಎಂದೇ ಪರಿಗಣಿತವಾಗಿದೆ. ಈ ಪ್ರವಾಸ ವಿಶ್ವಮಟ್ಟದಲ್ಲಿ ತೀವ್ರ ಗಮನಸೆಳೆದಿದೆ.

ಶನಿವಾರ ಜಪಾನ್‌ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಮೋದಿ ಅವರು ಅಲ್ಲಿಂದ ನೇರವಾಗಿ ಸಂಜೆ ಚೀನಾಗೆ ಆಗಮಿಸಿದರು. ಅವರನ್ನು ಭಾರತೀಯ ಶೈಲಿಯಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು.

ಕ್ಸಿ ಜತೆ ದ್ವಿಪಕ್ಷೀಯ ಸಭೆ:

ಭಾನುವಾರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಈ ವೇಳೆ ಭಾರತ ಮತ್ತು ಚೀನಾದ ಆರ್ಥಿಕ ಸಂಬಂಧಗಳು ಹಾಗೂ ಗಲ್ವಾನ್‌ ಗಡಿ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

ಈ ಶೃಂಗದ ಸಂದರ್ಭದಲ್ಲೇ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸೇರಿ ವಿಶ್ವದ ಹಲವು ನಾಯಕರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉಕ್ರೇನ್‌-ರಷ್ಯಾ ಯುದ್ಧ ತಣಿಸುವುದು ಹಾಗೂ ಭಾರತ-ರಷ್ಯಾ ನಡುವಿನ ಆರ್ಥಿಕ, ವ್ಯಾಪಾರ ಸಂಬಂಧ ಬಲಪಡಿಸುವ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಚೀನಾ ಭೇಟಿಗೂ ಮುನ್ನ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ವಿಶ್ವ ಆರ್ಥಿಕತೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಭಾರತ ಮತ್ತು ಚೀನಾ ಜತೆಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಮೋದಿ ಪೋಸ್ಟ್‌ ಹಾಕಿದ್ದಾರೆ.

ಶಾಂಘೈ ಕೋಆಪರೇಷನ್ ಆರ್ಗನೈಸೇಷನ್‌ ಶೃಂಗವು ಚೀನಾದ ಪಾಲಿಗೆ ಶಕ್ತಿಪ್ರದರ್ಶನದ ವೇದಿಕೆಯಾಗಲಿದ್ದು, ಮೋದಿ, ಜಿನ್‌ಪಿಂಗ್‌, ಪುಟಿನ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಅಮೆರಿಕದ ಪ್ರತಿ ಸುಂಕದ ಹಿನ್ನೆಲೆಯಲ್ಲಿ ಈ ಶೃಂಗ ವಿಶ್ವದ ಗಮನ ಸೆಳೆದಿದೆ.

ಪ್ರಧಾನಿ ಕೊನೆಯ ಬಾರಿಗೆ ಜೂನ್ 2018 ರಲ್ಲಿ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಿದ್ದರು. ನಂತರ 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ಏರ್ಪಟ್ಟು ಭಾರತದ 20 ಸೈನಿಕರು ಚೀನಾ ದಾಳಿಗೆ ಬಲಿಯಾಗಿದ್ದರು. ಆಗ ಉಭಯ ದೇಶಗಳ ಸಂಬಂಧ ಹಳಸಿತ್ತು ಮತ್ತು ಮೋದಿ ಚೀನಾಗೆ ಹೋಗಿರಲಿಲ್ಲ.

2019ರ ಗಲ್ವಾನ್‌ ಸಂಘರ್ಷದ ಬಳಿಕ ಭಾರತ- ಚೀನಾ ಸಂಬಂಧ ಪೂರ್ಣ ಹಳಸಿತ್ತು. ಪರಿಸ್ಥಿತಿ ಯುದ್ಧದವರೆಗೂ ತಲುಪಿತ್ತು

ಬಳಿಕ ಉಭಯ ದೇಶಗಳು ನೇರ ವಿಮಾನ, ಪ್ರವಾಸಿ ವೀಸಾ ವಿತರಣೆ ಸ್ಥಗಿತಗೊಳಿಸಿದ್ದವು. ಅಗತ್ಯ ವಸ್ತು ಪೂರೈಕೆ ರದ್ದಾಗಿತ್ತು

ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್‌ ತೆರಿಗೆ ಯುದ್ಧದ ಬಳಿಕ ಮತ್ತೆ ಸಂಬಂಧ ಸುಧಾರಣೆಯತ್ತ ಹೆಜ್ಜೆ ಇಟ್ಟಿದ್ದ ಉಭಯ ದೇಶಗಳು

ಇದರ ಭಾಗವಾಗಿ ಶೃಂಗದಲ್ಲಿ ಸ್ವತಃ ಮೋದಿ ಭಾಗಿ. ಅಲ್ಲಿ ಒಗ್ಗಟ್ಟಿನ ಮೂಲಕ ಟ್ರಂಪ್‌ಗೆ ಗ್ಲೋಬಲ್‌ ಸೌತ್‌ನ ಶಕ್ತಿ ಪ್ರದರ್ಶನ

ದ್ವಿಪಕ್ಷೀಯ ಮಾತುಕತೆ ವೇಳೆ ಗಡಿ ಸಂಘರ್ಷ, ವ್ಯಾಪಾರ ಸಂಬಂಧ ಸುಧಾರಣೆ, ಪಾಕ್‌ ಬೆಂಬಲಿಸದಂತೆ ಮೋದಿ ಮನವಿ

ಜಪಾನ್‌ನಲ್ಲಿ ಮೋದಿ300 ಕಿ.ಮೀ ಬುಲೆಟ್‌ ರೈಲಿನಲ್ಲಿ ಸಂಚಾರ 

ಟೋಕಿಯೋ: ಪ್ರಧಾನಿ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಗೆರು ಇಷಿಬಾ ಶನಿವಾರ ರಾಜಧಾನಿ ಟೋಕಿಯೋದಿಂದ 300 ಕಿ.ಮೀ. ದೂರದಲ್ಲಿರುವ ಸೆಂಡೈವರೆಗೆ ಬುಲೆಟ್‌ ರೈಲಿನ ಮೂಲಕ ಪ್ರಯಾಣ ಮಾಡಿದರು. ಬಳಿಕ ಜಪಾನ್‌ನಲ್ಲಿ ಬುಲೆಟ್‌ ರೈಲಿನ ತರಬೇತಿ ಪಡೆಯುತ್ತಿರುವ ಭಾರತೀಯ ಚಾಲಕರ ಜತೆ ಮೋದಿ ಮಾತುಕತೆ ನಡೆಸಿದರು. ಇದೇ ವೇಳೆ ಆಲ್ಫಾ-ಎಕ್ಸ್‌ ಮಾದರಿಯ ಬುಲೆಟ್‌ ರೈಲನ್ನು ವೀಕ್ಷಿಸಿದರು.

Read more Articles on