ನನಗಾಗಿ ಗಾಜಿನ ಅರಮನೆ ಬದಲು ಜನರಿಗೆ ಮನೆ ಕಟ್ಟಿಕೊಟ್ಟೆ : ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

| Published : Jan 04 2025, 12:33 AM IST / Updated: Jan 04 2025, 04:41 AM IST

ನನಗಾಗಿ ಗಾಜಿನ ಅರಮನೆ ಬದಲು ಜನರಿಗೆ ಮನೆ ಕಟ್ಟಿಕೊಟ್ಟೆ : ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಆಡಳಿತಾರೂಢ ಆಮ್‌ಆದ್ಮಿ ಪಕ್ಷ ಮತ್ತು ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಆಪ್‌ ದೆಹಲಿ ಪಾಲಿಗೆ ಆಪ್ಡಾ (ವಿನಾಶಕಾರಿ) ಎಂದು ಬಣ್ಣಿಸಿದ್ದಾರೆ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಆಡಳಿತಾರೂಢ ಆಮ್‌ಆದ್ಮಿ ಪಕ್ಷ ಮತ್ತು ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಆಪ್‌ ದೆಹಲಿ ಪಾಲಿಗೆ ಆಪ್ಡಾ (ವಿನಾಶಕಾರಿ) ಎಂದು ಬಣ್ಣಿಸಿದ್ದಾರೆ. ಅಲ್ಲದೆ ತಮ್ಮ ಮನೆಯನ್ನು ಐಷಾರಾಮಿಯಾಗಿ ಪರಿವರ್ತಿಸಿಕೊಂಡ ಕೇಜ್ರಿ ವಿರುದ್ಧವೂ ವ್ಯಂಗ್ಯವಾಡಿರುವ ಮೋದಿ, ನಾನು ನನಗಾಗಿ ಗಾಜಿನ ಅರಮನೆ ಕಟ್ಟಿಕೊಳ್ಳಬಹುದಿತ್ತು, ಆದರೆ ಅದರ ಬದಲು ಜನರಿಗಾಗಿ ಮನೆ ನಿರ್ಮಿಸಿದೆ’ ಎಂದು ಹೇಳಿದ್ದಾರೆ.

ಶುಕ್ರವಾರ ದೆಹಲಿಯಲ್ಲಿ ದೆಹಲಿಯಲ್ಲಿ ವಸತಿ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಮೋದಿ ಆಪ್‌ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಒಂದು ಕಡೆ ಕೇಂದ್ರ ಶ್ರಮ ಪಡುತ್ತಿದ್ದರೆ, ಇನ್ನೊಂದು ಕಡೆ ದೆಹಲಿ ಸರ್ಕಾರ ಶಿಕ್ಷಣ, ಮಾಲಿನ್ಯ, ಮದ್ಯ ಹಗರಣ ಸೇರಿದಂತೆ ಎಲ್ಲಾ ವಿಷಯದಲ್ಲಿ ಭ್ರಷ್ಟಾಚಾರ ಮಾಡಿ ಸುಳ್ಳು ಹೇಳುತ್ತಿದೆ. ಆಪ್‌ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದ ಕಾರಣ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿ ನಿರ್ಮಿಸಿ, ಬಡವರಿಗೆ ಮನೆ ನಿರ್ಮಿಸಲು ಸಾಧ್ಯವಾಯಿತು’ ಎಂದರು.

ಈ ವರ್ಷ ರಾಷ್ಟ್ರ ನಿರ್ಮಾಣದ ಹೊಸ ರಾಜಕೀಯ ಹಾಗೂ ಜನರ ಕಲ್ಯಾಣಕ್ಕೆ ನಾಂದಿ ಹಾಡಲಿದೆ ಎಂದ ಮೋದಿ, ‘ಆಪ್‌ ಸರ್ಕಾರದಿಂದಾಗಿ ಆಯುಷ್ಮಾನ್‌ ಭಾರತ ಸೇರಿದಂತೆ ಕೇಂದ್ರದ ಇತರೆ ಯೋಜನೆಗಳು ಇಲ್ಲಿಗೆ ತಲುಪುತ್ತಿಲ್ಲ. ದೆಹಲಿ ಪಾಲಿಗೆ ಆಪ್‌ ವಿಪತ್ತಿದ್ದಂತೆ. ಆಡಳಿತ ಮುಂದುವರೆದರೆ ಪರಿಸ್ಥಿತಿ ಇನ್ನೂ ಹದಗೆಡಲಿದೆ. ಅದರಿಂದ ಮುಕ್ತರಾಗಲು ನಿರ್ಧರಿಸಿ’ ಎಂದು ಹೇಳಿದ್ದಾರೆ.

₹10 ಲಕ್ಷ ಸೂಟ್‌ ಧರಿಸುವ ಮೋದಿಗೆ ನನ್ನ ಮನೆ ಬಗ್ಗೆ ಮಾತಾಡುವ ಹಕ್ಕಿಲ್ಲ: ಕೇಜ್ರಿ

ನವದೆಹಲಿ: ತಮ್ಮ ನವೀಕೃತ ಮನೆಯನ್ನು ಗಾಜಿನ ಅರಮನೆಗೆ ಹೋಲಿಸಿದ ಪ್ರಧಾನಿ ಮೋದಿ ಟೀಕೆಗೆ ತಿರುಗೇಟು ನೀಡಿರುವ ದೆಹಲಿಯ ಮಾಜಿ ಸಿಎಂ ಕೇಜ್ರಿವಾಲ್‌, 10 ಲಕ್ಷ ರು. ಸೂಟ್‌ ಧರಿಸುವವರು, ತನಗಾಗಿ 2700 ಕೋಟಿ ರು. ಮನೆಯನ್ನು ನಿರ್ಮಿಸಿಕೊಳ್ಳುವವರು, 8400 ಕೋಟಿ ರು. ಮೊತ್ತದ ಐಷಾರಾಮಿ ವಿಮಾನದಲ್ಲಿ ಪ್ರಯಾಣ ಮಾಡುವವರು ನನ್ನ ಮನೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ ಮೋದಿ, 43 ನಿಮಿಷ ಕಾಲ ಭಾಷಣ ಮಾಡಿದರು. ಆದರೆ ಅದರಲ್ಲಿ 39 ನಿಮಿಷ ಕೇವಲ ದೆಹಲಿಯ ಜನರು ಮತ್ತು ಸರ್ಕಾರವನ್ನು ನಿಂದಿಸುವಲ್ಲಿಯೇ ಕಳೆದರು. ಇದು ದೆಹಲಿ ಬಗ್ಗೆ ಅವರ ಅಗೌರವವನ್ನು ತೋರಿಸುತ್ತದೆ ಎಂದು ಹೇಳಿದರು.